ಲಕ್ನೋ: ಹತ್ತು ಜನ ದಲಿತರನ್ನು (Dalits) ಹತ್ಯೆ ಮಾಡಿದ್ದ ಉತ್ತರಪ್ರದೇಶದ (Uttar Pradesh) ವ್ಯಕ್ತಿಯೊಬ್ಬನಿಗೆ 90ನೇ ವಯಸ್ಸಿನಲ್ಲಿ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.
ಅಪರಾಧಿ ಗಂಗಾ ದಯಾಳ್‍ಗೆ ಜೀವಾವಧಿ ಶಿಕ್ಷೆ (Life Imprisonment) ವಿಧಿಸಿರುವ ಫಿರೋಜಾಬಾದ್ ಜಿಲ್ಲಾ ಕೋರ್ಟ್ (Firozabad Court), ಜೊತೆಗೆ 55,000 ರೂ.
ದಂಡವನ್ನು ಸಹ ವಿಧಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ 13 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.
42 ವರ್ಷಗಳ ಹಿಂದೆ ನಡೆದಿದ್ದ ಈ ಹತ್ಯೆ ಪ್ರಕರಣ ದೇಶಾದ್ಯಂತ ಆಘಾತವನ್ನುಂಟು ಮಾಡಿತ್ತು. 1981ರಲ್ಲಿ ಸದುಪುರ (Sadupur) ಗ್ರಾಮದಲ್ಲಿ ಹಿಂಸಾಚಾರ ನಡೆದು 10 ಮಂದಿಯನ್ನು ನಿರ್ದಯವಾಗಿ ಕೊಲ್ಲಲಾಗಿತ್ತು. ಅಲ್ಲದೆ ಹಿಂಸಾಚಾರದಲ್ಲಿ ಇಬ್ಬರು ಗಾಯಗೊಂಡಿದ್ದರು. ತನಿಖೆಯಲ್ಲಿ 10 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು 307 ಅಡಿಯಲ್ಲಿ ಕೊಲೆ ಹಾಗೂ ಹಲ್ಲೆ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಗುರುತಿಸಲಾಗಿದ್ದ 10 ಆರೋಪಿಗಳಲ್ಲಿ 9 ಜನ ಆರೋಪಿಗಳು ವಿಚಾರಣೆ ಎದುರಿಸುತ್ತಿರುವಾಗಲೇ ಸಾವನ್ನಪ್ಪಿದ್ದರು. ಉಳಿದ ಏಕೈಕ ಅಪರಾಧಿ ಗಂಗಾ ದಯಾಳ್ ಈಗ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.