ಬೆಳಗಾವಿ : RSS, ಬಜರಂಗದಳವನ್ನು ಬ್ಯಾನ್ ಮಾಡಿದರೆ ಪ್ರಯೋಜನವಿಲ್ಲ, ಕಾರ್ಯಕರ್ತರನ್ನು ರಿಪೇರಿ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಆರ್‌ಎಸ್‌ಎಸ್, ಬಜರಂಗ ದಳ ನಿಷೇಧ ವಿಷಯದ ಕುರಿತು ಮಾತನಾಡಿದ ಅವರು ಹೀಗೆ ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಒಳಗೆ ಚರ್ಚೆ ನಡೆದು ನಂತರ ಕ್ರಮ ಜರುಗಿಸಬೇಕಿರುವುದರಿಂದ ತಕ್ಷಣಕ್ಕೆ ಯಾವುದೇ ಕ್ರಮವಿಲ್ಲ ಎಂದರು. ಆರ್‌ಎಸ್‌ಎಸ್, ಬಜರಂಗದಳವನ್ನು ಬ್ಯಾನ್ ಮಾಡಿದರೆ ಪ್ರಯೋಜನವಿಲ್ಲ, ಅದರಲ್ಲಿ ಇರೋರನ್ನು ಹೊರಗೆ ತೆಗೆದು ರಿಪೇರಿ ಮಾಡಬೇಕು ಎಂದರು.
ಸಂಘವನ್ನು ಬ್ಯಾನ್ ಮಾಡಿದರೆ ಮತ್ತೊಂದು ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಅಲ್ಲಿರುವ ಶೂದ್ರರನ್ನು ಹೊರ ತಂದು ಬಸವಣ್ಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಹೇಳಿ ಅವರ ಮನಪರಿವರ್ತನೆ ಮಾಡಬೇಕು. .ಬಿಜೆಪಿಯವರು ತಾಕತ್ತಿದ್ದರೆ ಬ್ಯಾನ್ ಮಾಡಿನೋಡಿ ಎಂದು ಧಮ್ಕಿ ಹಾಕುತ್ತಾರೆ. ಅವರಿಗೆ ನಾನು ಹೇಳುವುದೆಂದರೆ ನೀವು ತಾಕತ್ತಿದ್ದರೆ ಕಾನೂನು ಉಲ್ಲಂಘನೆ ಮಾಡಿ ನೋಡಿ ಆಗ ಅಂಬೇಡ್ಕರ್ ಅವರ ಸಂವಿಧಾನದ ಪವರ್ ಏನು ಎಂದು ನಾವು ತೋರಿಸುತ್ತೇವೆ ಎಂದರು.