ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತ್ರ ದ್ವೇಷ ರಾಜಕಾರಣ ಮಾಡುತ್ತಿದೆ. ಮೊದಲು ಇದನ್ನು ನಿಲ್ಲಿಸಬೇಕು ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ಧಾಳಿ ನಡೆಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ಪ್ರವೀಣ್ ನೆಟ್ಟಾರು ಪತ್ನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲಾಗಿತ್ತು.
ಈ ಮೂಲಕ ನೆಟ್ಟಾರು ಪತ್ನಿ ನೂತನಾಗೆ ಜೀವನ ಭದ್ರತೆಯನ್ನು ಕಲ್ಪಿಸಲಾಗಿತ್ತು ಎಂದರು.
ಕಾಂಗ್ರೆಸ್ ಸರ್ಕಾರದ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ತಕ್ಷಣ, ಅವರನ್ನು ಉದ್ಯೋಗದಿಂದ ತೆಗೆದು ಹಾಕಿದೆ. ಬಿಜೆಪಿ-ಕಾಂಗ್ರೆಸ್ ನಡುವೆ ವಿಚಾರಗಳು ಏನೇ ಇರಬಹುದು. ಸಿದ್ಧರಾಮಯ್ಯ ಅವರನ್ನು ನಾನು ವಿನಂತಿ ಮಾಡುತ್ತೇನೆ. ಪ್ರವೀಣ್ ನೆಟ್ಟಾರು ಪತ್ನಿ ನೂತನಾ ಅವರನ್ನು ಕೆಲಸದಿಂದ ಮುಂದುವರೆಸಬೇಕು ಎಂದರು.
ನೀವು ಕೊಡದೇ ಇದ್ದರೂ ನಾವೇನು ಅಂದುಕೊಳ್ಳುವುದಿಲ್ಲ. ನೀವು ಕೊಡದಿದ್ದರೇ, ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುವಂತಹ ಕೆಲಸ ಮಾಡುತ್ತೇವೆ. ನೀವು ಅವರನ್ನು ಉದ್ಯೋಗದಿಂದ ತೆಗೆದಿದ್ದು ಸರಿಯಲ್ಲ. ಮೊದಲು ನಿಮ್ಮ ದ್ವೇಷ ರಾಜಕಾರಣವನ್ನು ನಿಲ್ಲಿಸುವಂತೆ ಕಿಡಿಕಾರಿದರು.