ಕೇರಳ: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ 70 ವರ್ಷದ ವ್ಯಕ್ತಿಯೊಬ್ಬರು ಅವರ ಮೊಬೈಲನ್ನು ಶರ್ಟ್ ಜೇಬಿಗೆ ಇಟ್ಟುಕೊಂಡಿದ್ದರು. ಮೊಬೈಲ್ ಫೋನ್ ಇದ್ದಕ್ಕಿದ್ದಂತೇ ಸಿಡಿದು ಬೆಂಕಿ ಹೊತ್ತಿಕೊಂಡಿದ್ದರಿಂದ ಸ್ವಲ್ಪದರಲ್ಲೇ ಸುಟ್ಟ ಗಾಯಗಳಿಂದ ಪಾರಾಗಿದ್ದ ಘಟನೆ ನಡೆದಿದೆ.
ಗುರುವಾರ ಬೆಳಗ್ಗೆ 10 ಗಂಟೆಗೆ ಈ ಘಟನೆ ನಡೆದಿದ್ದು, ಇಲಿಯಾಸ್ ಎಂಬ ವ್ಯಕ್ತಿ ಮರೋಟ್ಟಿಚಾಲ್ ಪ್ರದೇಶದ ಚಹಾ ಅಂಗಡಿಯಲ್ಲಿ ಕುರ್ಚಿಯ ಮೇಲೆ ಕುಳಿತಿದ್ದ ವೇಳೆ ಈ ಘಟನೆ ನಡೆದಿದೆ.
ಒಂದು ತಿಂಗಳೊಳಗೆ ರಾಜ್ಯದಲ್ಲಿ ನಡೆದ ಇಂತಹ ಮೂರನೇ ಘಟನೆ ಇದಾಗಿದೆ. ಮೊಬೈಲ್ ಫೋನ್ ಹಠಾತ್ ಸ್ಫೋಟಗೊಂಡಿದ್ದು, ಇಲ್ಲಿನ ಮರೋಟ್ಟಿಚಾಲ್ ಪ್ರದೇಶದ ಟೀ ಅಂಗಡಿಯಲ್ಲಿ ವ್ಯಕ್ತಿ ಚಹಾ ಸೇವಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಘಟನೆಯ ದೃಶ್ಯಗಳು ವೈರಲ್ ಆಗಿವೆ. ವಿಡಿಯೋದಲ್ಲಿ ವ್ಯಕ್ತಿ ಅಂಗಡಿಯಲ್ಲಿನ ಟೇಬಲ್‌ನಲ್ಲಿ ಕುಳಿತು ಚಹಾ ಸೇವಿಸುವುದನ್ನು ಮತ್ತು ಏನನ್ನಾದರೂ ತಿನ್ನುತ್ತಿರುವುದನ್ನು ನೋಡಬಹುದು. ಈ ವೇಳೆ, ಅವನ ಶರ್ಟ್ ಜೇಬಿನಲ್ಲಿರುವ ಫೋನ್ ಸಿಡಿದು ಬೆಂಕಿ ಹೊತ್ತಿಕೊಂಡಿತು. ಕೂಡಲೇ ವ್ಯಕ್ತಿ ತನ್ನ ಜೇಬಿನಿಂದ ಮೊಬೈಲ್ ಫೋನ್ ಅನ್ನು ಹೊರತೆಗೆಯಲು ಪ್ರಯತ್ನಿಸುತ್ತಾನೆ. ಫೋನ್ ಅವನ ಜೇಬಿನಿಂದ ನೆಲದ ಮೇಲೆ ಬೀಳುತ್ತಿದ್ದಂತೆ ಅವರು ಅಲ್ಲಿಂದ ಹೊರ ನಡೆದಿದ್ದಾರೆ.
ವ್ಯಕ್ತಿ ಈ ಮೊಬೈಲ್ ಅನ್ನು ವರ್ಷದ ಹಿಂದೆ 1000 ರೂ.ಗೆ ಖರೀದಿಸಿದ್ದು, ಅದೊಂದು ಫೀಚರ್ ಫೋನ್ ಎಂದು ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ. ಇಲ್ಲಿಯವರೆಗೆ, ಸಾಧನದಲ್ಲಿ ಯಾವುದೇ ಸಮಸ್ಯೆಗಳು ಕಾಣಿಸಿಕೊಂಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕಳೆದ ವಾರ, ಕೋಝಿಕ್ಕೋಡ್ ನಗರದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಪ್ಯಾಂಟ್ ಜೇಬಿನಲ್ಲಿಟ್ಟಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ವ್ಯಕ್ತಿಯೊಬ್ಬನಿಗೆ ಸುಟ್ಟಗಾಯಗಳಾಗಿದ್ದವು.