ಜಿನಿವಾ: ದಿನೇ ದಿನೇ ಹಸಿರುಮನೆ ಅನಿಲಿಗಳ ಪ್ರಮಾಣ ಹಾಗೂ ಎಲ್ ನಿನೋ ಪರಿಣಾಮದಿಂದಾಗಿ ಮುಂದಿನ ಐದು ವರ್ಷಗಳವರೆಗೆ ವಿಶ್ವದಾದ್ಯಂತ ಅತಿ ಹೆಚ್ಚು ತಾಪಮಾನ ಕಂಡುಬರಲಿದೆ ಎಂದು ವಿಶ್ವ ಸಂಸ್ಥೆಯ ಜಾಗತಿಕ ಹವಾಮಾನ ವಿಭಾಗವು ಎಚ್ಚರಿಸಿದೆ.
ಈ ಬಗ್ಗೆ ಬುಧವಾರ ಮಾಹಿತಿಯನ್ನು ಹಂಚಿಕೊಂಡಿದೆ.ಈಗಾಗಲೇ ದೇಶದಲ್ಲಿ ಈ ಬಾರಿಯ ಬೇಸಿಗೆ ಕಾಲವು ವಿಪರೀತ ಸೆಕೆಯನ್ನು ಉಂಟುಮಾಡಿದೆ. ದೇಶದ ಜನರು ಉಷ್ಣ ಮಾರುತದ ಹೊಡೆತಕ್ಕೆ ತತ್ತರಿಸುತ್ತಿದ್ದಾರೆ. ಇದರ ಬೆನ್ನಲ್ಲೇ, 2023 ರಿಂದ 2027ರವರೆಗೆ ಇತಿಹಾಸದಲ್ಲಿ ಕಂಡಿರದ ಪ್ರಮಾಣದ ತಾಪಮಾನ ಇರಲಿದೆ ಎಂದು ಎಚ್ಚರಿಸಿದೆ.
ಕಳೆದ 7 ವರ್ಷಗಳಲ್ಲಿ 2015 ರಿಂದ 2022ರವರೆಗೆ ಗರಿಷ್ಠ ತಾಪಮಾನವು ವರದಿಯಾಗಿದೆ. ವರ್ಷದಿಂದ ವರ್ಷಕ್ಕೆ ಉಷ್ಣ ಮಾರುತಗಳ ಅಬ್ಬರ ಏರಿಕೆ ಕಾಣುತ್ತಲೇ ಇದೆ. ಇದರ ಪರಿಣಾಮ ಮುಂದಿನ ಐದು ವರ್ಷ ಕೂಡ ತಾಪಮಾನ ಹೆಚ್ಚಾಗಿ ಜನರಲ್ಲಿ ಆತಂಕವನ್ನು ಮೂಡಿಸಲಿದೆ ಎಂಬುದಾಗಿ ತಿಳಿಸಿದೆ.
ಅಂದಹಾಗೇ ಜಾಗತಿಕವಾಗಿ ವಾರ್ಷಿಕ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯ ಸಾಧ್ಯತೆ ಶೇ.66ರಷ್ಟಿದೆ. ಇದು ಮುಂದಿನ ಐದು ವರ್ಷದಲ್ಲಿ 1.1 ಡಿಗ್ರಿ ಸೆಲ್ಸಿಯಸ್ ನಿಂದ 1.8 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಲಿದೆ ಎಂದು ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ವಿಭಾಗವು ಅಂದಾಜಿಸಿದೆ.