ಪಂಜಾಬ್ ಹಾಗೂ ಹರಿಯಾಣ ಗಡಿಯಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಕಬ್ಬಿಗೆ ನೀಡುವ ನ್ಯಾಯಯುತ ಹಾಗೂ ಪ್ರೋತ್ಸಾಹಧನವನ್ನು ಕ್ವಿಂಟಾಲ್ಗೆ 25 ರೂ. ಏರಿಕೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಕಬ್ಬಿನ ನ್ಯಾಯಯುತ ಹಾಗೂ ಪ್ರೋತ್ಸಾಹಧನವನ್ನು 25 ರೂ. ಏರಿಸಲು ತೀರ್ಮಾನಿಸಲಾಗಿದೆ. ಇದರಿಂದಾಗಿ 2024-25ನೇ ಸಾಲಿನ ಅಕ್ಟೋಬರ್ನಿಂದ ಕಬ್ಬಿನ ಮಾರಾಟ ಆರಂಭವಾಗಲಿದ್ದು, ರೈತರು ಕ್ವಿಂಟಾಲ್ಗೆ 315 ರೂ. ಬದಲಾಗಿ 340 ರೂ. ನ್ಯಾಯಯುತ ಹಾಗೂ ಪ್ರೋತ್ಸಾಹಧನ ಪಡೆಯಲಿದ್ದಾರೆ.
ಲೋಕಸಭೆ ಚುನಾವಣೆಗೂ ಮೊದಲೇ ಕೇಂದ್ರ ಸರ್ಕಾರವು ಕಬ್ಬಿನ ಪ್ರೋತ್ಸಾಹಧನವನ್ನು ಹೆಚ್ಚಿಸಿದ್ದು, ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ರಾಜಕೀಯದ ಹೊರತಾಗಿ ಕೇಂದ್ರ ಸರ್ಕಾರದ ತೀರ್ಮಾನದಿಂದ ರೈತರಿಗೆ ಅನುಕೂಲವಾಗಲಿದೆ.
ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ಎಂಬುದು ಕಬ್ಬು ಖರೀದಿಸುವ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡುವ ಪ್ರೋತ್ಸಾಹ ಧನವಾಗಿದೆ. ಇದನ್ನು ಕೇಂದ್ರ ಸರ್ಕಾರವೇ ನಿಗದಿ ಮಾಡುತ್ತದೆ. ಇದರಿಂದ ರೈತರು ಕಬ್ಬು ಮಾರಾಟ ಮಾಡುವಾಗ ಹೆಚ್ಚಿನ ಬೆಲೆ ಪಡೆಯಲು ಸಾಧ್ಯವಾಗಲಿದೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ದೇಶದ 5 ಕೋಟಿ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ.