ಅಮೇಲಿಯಾ ಕೇರ್ ಆಲ್‌ರೌಂಡರ್ ಆಟ ಹಾಗೂ ಹರ್ಮನ್ ಪ್ರೀತ್ ಕೌರ್ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ಮಹಿಳಾ (Mumbai Indians Women) ತಂಡ ಗುಜರಾತ್ ಜೈಂಟ್ಸ್ ಮಹಿಳಾ (Gujarat Giants Women) ತಂಡದ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ.ಮಹಿಳಾ ಪ್ರೀಮಿಯರ್ ಲೀಗ್ (WPL) ಮೊದಲ ಆವೃತ್ತಿಯಲ್ಲಿ ಸತತ ಗೆಲುವಿನೊಂದಿಗೆ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಮುಂಬೈ ಇಂಡಿಯನ್ಸ್ 2ನೇ ಆವೃತ್ತಿಯಲ್ಲೂ ಜಯದ ಓಟ ಮುಂದುವರಿಸಿದೆ. ಆರಂಭಿಕ ಎರಡೂ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ದಿಂಗ್ ಆಯ್ದುಕೊಂಡ ಮುಂಬೈ, ಬ್ಯಾಟಿಂಗ್ ಮಾಡುವ ಅವಕಾಶವನ್ನು ಗುಜರಾತ್ ಜೈಂಟ್ಸ್ ಮಹಿಳಾ ತಂಡಕ್ಕೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಮುಂಬೈ 18.1 ಓವರ್‌ಗಳಲ್ಲೇ 129 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಚೇಸಿಂಗ್ ಆರಂಭಿಸಿದ ಮುಂಬೈ ಒಂದೆಡೆ ರನ್ ಕಲೆಹಾಕಿದರೂ ಮತ್ತೊಂದೆಡೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಗುಜರಾತ್ ತಂಡ ಫೀಲ್ಡಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ್ದರಿಂದ ಮುಂಬೈಗೆ ಗೆಲುವು ಕಷ್ಟವೆಂದೇ ಭಾವಿಸಲಾಗಿತ್ತು. ಈ ವೇಳೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಹಾಗೂ ಅಮೆಲಿಯಾ ಕೆರ್ (Amelia Kerr) 50 ಎಸೆತಗಳಲ್ಲಿ 66 ರನ್‌ಗಳ ಜೊತೆಯಾಟ ನೀಡಿದರು. ಇದರಿಂದ ಗೆಲುವು ಮುಂಬೈ ತಂಡದತ್ತ ವಾಲಿತು.
ಮುಂಬೈ ಪರ ಹರ್ಮನ್ ಪ್ರೀತ್ ಕೌರ್ 46 ರನ್, ಅಮೇಲಿಯಾ ಕೇರ್ 31 ರನ್, ನಟಾಲಿ ಸ್ಕೀವರ್ ಬ್ರಂಟ್ 22 ರನ್, ಹೇಲಿ ಮ್ಯಾಥ್ಯೂಸ್ ಹಾಗೂ ಯಸ್ತಿಕಾ ಭಾಟಿಯಾ ತಲಾ 7 ರನ್, ಪೂಜಾ ವಸ್ತ್ರಕಾರ್ 1 ರನ್ ಗಳಿಸಿದರು. ಗುಜರಾತ್ ಜೈಂಟ್ಸ್ ಪರ ತನುಜಾ ಕನ್ವರ್ 2 ವಿಕೆಟ್ ಕಿತ್ತರೆ, ಕ್ಯಾಥರಿನ್ ಬ್ರೈಸ್ ಮತ್ತು ಲಿಯಾ ತಹುಹು ತಲಾ ಒಂದೊಂದು ವಿಕೆಟ್ ಪಡೆದರು.