ಗಾಂಧಿನಗರ: 28 ವರ್ಷ ವಯಸ್ಸಿನ ರೂಪದರ್ಶಿ ತಾನ್ಯಾ ಸಿಂಗ್ ಅವರ ನಿಗೂಢ ಸಾವು ಪ್ರಕರಣ ಗುಜರಾತ್ ರಾಜ್ಯದ ಸೂರತ್ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎರಡು ದಿನಗಳ ಕಳೆದರೂ ಸಾವಿನ ಯಾವುದೇ ಸುಳಿವು ಪತ್ತೆಯಾಗದ ಕಾರಣ ಪೊಲೀಸರು ತಲೆ ಕೆಡಿಸಿಕೊಂಡು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.
ಸದ್ಯ ತಾನ್ಯಾಳ ಸಾವಿಗೆ ಕಾರಣವೇನು ಎಂದು ಪತ್ತೆ ಮಾಡಲು ಹೊರಟಿರುವ ಪೊಲೀಸರಿಗೆ, ಕ್ರಿಕೆಟ್ ಆಟಗಾರನ ಜೊತೆ ತಾನ್ಯಾಗೆ ಇರುವ ಲಿಂಕ್ ಪತ್ತೆಯಾಗಿದೆ. ಐಪಿಎಲ್ ತಂಡ ಸನ್‌ರೈಸರ್ಸ್ ಹೈದರಾಬಾದ್‌ನ ಆಲ್‌ರೌಂಡರ್ ಆಟಗಾರ ಅಭಿಷೇಕ್ ಶರ್ಮಾ ಜೊತೆ ತಾನ್ಯಾ ಸಿಂಗ್‌ಗೆ ಇದ್ದ ನಂಟನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಸದ್ಯಕ್ಕೆ ಇದನ್ನು ಆತ್ಮಹತ್ಯೆ ಎಂದೇ ಹೇಳಲಾಗುತ್ತಿದೆ.
ರೂಪದರ್ಶಿ ತಾನ್ಯಾ ಸಿಂಗ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಲ್ ರೌಂಡರ್ ಆಟಗಾರ ಅಭಿಷೇಕ್ ಶರ್ಮಾ ನಡುವೆ ಗೆಳೆತನ ಇತ್ತು ಅನ್ನೋದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ವಿ. ಆರ್. ಮಲ್ಹೋತ್ರಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಮಾಡೆಲ್ ತಾನ್ಯಾ ಸಿಂಗ್ ತಾನು ಸಾವಿಗೆ ಶರಣಾಗುವ ಮುನ್ನ ಐಪಿಎಲ್ ಸ್ಟಾರ್ ಅಭಿಷೇಕ್ ಶರ್ಮಾಗೆ ವಾಟ್ಸಪ್ ಮೂಲಕ ಸಂದೇಶ ರವಾನೆ ಕಳಿಸಿದ್ದಾಳೆ. ಆದ್ರೆ ಅದಕ್ಕೆ ಅಭಿಷೇಕ್ ಉತ್ತರ ಕೊಟ್ಟಿಲ್ಲ. ಪೊಲೀಸರ ತನಿಖೆಯಲ್ಲಿ ಈವರಿಬ್ಬರ ನಡುವಿನ ಮಾತುಕತೆಗಳು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಇನ್ನೂ ಅಭಿಷೇಕ್ ಶರ್ಮಾರನ್ನ ಸಂಪರ್ಕಿಸಿಲ್ಲ. ಆದ್ರೆ ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಅವರಿಗೆ ನೋಟಿಸ್ ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆಲ್ ರೌಂಡರ್ ಆಗಿರುವ ಅಭಿಷೇಕ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ.