ಮೃತ ರೈತನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ.! ಕುಟುಂಬದವರಿಗೆ ಸರ್ಕಾರಿ ಉದ್ಯೋಗ: ಪಂಜಾಬ್ ಸಿಎಂ ಘೋಷಣೆ

 ಚಂಡೀಗಢ: ರೈತರ ಪ್ರತಿಭಟನೆಯ ವೇಳೆ ಮೃತಪಟ್ಟ ಶುಭಕರನ್ ಸಿಂಗ್ ಕುಟುಂಬಕ್ಕೆ 1 ಕೋಟಿ ಆರ್ಥಿಕ ನೆರವು ಮತ್ತು ಕಿರಿಯ ಸಹೋದರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶುಕ್ರವಾರ ಘೋಷಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೂಡ ನೀಡಿದ್ದಾರೆ.

ಕನಿಷ್ಠ ಬೆಂಬಲ ಬೆಲೆ (MSP ) ಗಾಗಿ ಕೇಂದ್ರದ ಪ್ರಸ್ತಾವನೆಗಳನ್ನು ಒಪ್ಪದ ಪ್ರತಿಭಟನಾಕಾರರು ತಮ್ಮ ‘ದೆಹಲಿ ಚಲೋ’ ನಡೆಸಿದರು. ಅಂತೆಯೇ ಫೆಬ್ರವರಿ 13 ರಂದು ಶುಭಕರನ್ ಅವರು ಖಾನೌರಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತರೊಂದಿಗೆ ಸೇರಿಕೊಳ್ಳುವ ಮೂಲಕ ದುರಂತ ಅಂತ್ಯ ಕಂಡರು. ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖಾನೌರಿ ಗಡಿಯಲ್ಲಿ ಬುಧವಾರ ನಡೆದ ಘರ್ಷಣೆಯಲ್ಲಿ ಬಟಿಂಡಾ ಮೂಲದ ಸಿಂಗ್ (21) ಸಾವನ್ನಪ್ಪಿದ್ದು, 12 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾ ನಿರತ ರೈತರು ಬ್ಯಾರಿಕೇಡ್‌ಗಳತ್ತ ಸಾಗಲು ಯತ್ನಿಸಿದಾಗ ಈ ಘಟನೆ ನಡೆದಿದೆ.

ಸಾವಿಗೂ ಮುನ್ನಾ ದಿನ ಪಂಜಾಬ್-ಹರಿಯಾಣ ಗಡಿಯ (Punjab-Haryana border) ಸಮೀಪವಿರುವ ಪ್ರತಿಭಟನಾ ಸ್ಥಳದಲ್ಲಿ ಶುಭಕರನ್ ತನಗೆ ಮತ್ತು ಇತರ ರೈತರಿಗೆ ಉಪಹಾರವನ್ನು ಸಿದ್ಧಪಡಿಸಿದ್ದರು. ಸದ್ಯ ಇಬ್ಬರು ಸಹೋದರಿಯರು, ಅಜ್ಜಿ ಮತ್ತು ಅವರ ತಂದೆ ಚರಂಜಿತ್ ಸಿಂಗ್ ಅವರನ್ನು ಶುಭಕರನ್‌ ಸಿಂಗ್‌ ಅಗಲಿದ್ದಾರೆ. ಶುಭಕರನ್‌ ತಂದೆ ಶಾಲಾ ವಾಹನವೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಪಶುಸಂಗೋಪನೆಯಲ್ಲಿ ತೊಡಗಿಕೊಂಡಿದ್ದ ಶುಭಕರನ್, ಸುಮಾರು 3 ಎಕರೆ ಜಮೀನನ್ನು ಹೊಂದಿದ್ದರು. 

Loading

Leave a Reply

Your email address will not be published. Required fields are marked *