ವಿವಾಹದ ಕಾರಣ ಕೊಟ್ಟು ಮಹಿಳೆಯನ್ನು ಕೆಲಸದಿಂದ ತೆಗೆಯುವಂತಿಲ್ಲ- ಸುಪ್ರೀಂಕೋರ್ಟ್

ಮಹಿಳಾ ಉದ್ಯೋಗಿಗಳ ಮದುವೆ ಮತ್ತು ಅವರ ಕೌಟುಂಬಿಕ ಹೊಣೆಗಾರಿಕೆಗಳು ಸೌಲಭ್ಯ ವಂಚನೆಗೆ ಕಾರಣವಾಗುವ ಯಾವುದೇ ಕಾನೂನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 1988ರಲ್ಲಿ ಮದುವೆ ಬಳಿಕ ಕೆಲಸದಿಂದ ಬಿಡುಗಡೆಗೊಂಡಿದ್ದ ಕಾಯಂ ಉದ್ಯೋಗಿಗೆ ಮಿಲಿಟರಿ ನರ್ಸಿಂಗ್ ಸರ್ವಿಸ್‌ನಿಂದ 60 ಲಕ್ಷ ರೂ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

“ಅಂತಹ ಪುರುಷ ಪ್ರಧಾನ ನಿಯಮವನ್ನು ಒಪ್ಪಿಕೊಳ್ಳುವುದು ಮಾನವನ ಘನತೆಯನ್ನು ಹಾಗೂ ತಾರತಮ್ಯ ವಿರುದ್ಧದ ಹಕ್ಕನ್ನು ಕಡೆಗಣಿಸುತ್ತದೆ” ಎಂದು ನ್ಯಾಯಪೀಠವು, ಮಹಿಳೆಯನ್ನು ಉದ್ಯೋಗಕ್ಕೆ ಮರು ನೇಮಕ ಮಾಡಿಕೊಳ್ಳಬೇಕು ಎಂಬ ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೇಳಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪು ಉದ್ಯೋಗ ಕಳೆದುಕೊಂಡಿದ್ದ ಮಹಿಳಾ ಅಧಿಕಾರಿಯ 26 ವರ್ಷಗಳ ಕಾನೂನು ಹೋರಾಟಕ್ಕೆ ಕೊನೆಗೂ ಅಂತ್ಯ ಹಾಡಿದೆ. ಲೆಫ್ಟಿನೆಂಟ್ ಸೆಲಿನಾ ಜಾನ್ ಅವರಿಗೆ ಹಕ್ಕುಬದ್ಧ ಎಲ್ಲಾ ಸಂಪೂರ್ಣ ಹಾಗೂ ಅಂತಿಮ ಪರಿಹಾರದ ಮೊತ್ತವನ್ನು ಪಾವತಿಸುವಂತೆ ನ್ಯಾ ಸಂಜೀವ್ ಖನ್ನಾ ಮತ್ತು ನ್ಯಾ ದೀಪಾಂಕರ್ ದತ್ತಾ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

1977ರ ಆರ್ಮಿ ಇನ್‌ಸ್ಟ್ರಕ್ಷನ್ ನಂ 61ರ “ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಕಾಯಂ ನಿಯುಕ್ತಿ ಅನುಮೋದನೆಯ” ಸೇವಾ ನಿಯಮ ಹಾಗೂ ಷರತ್ತುಗಳ ಅಡಿಯಲ್ಲಿ ಸೆಲಿನಾ ಜಾನ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದರ ವಿರುದ್ಧ ಅವರು ದಾವೆ ಹೂಡಿದ್ದರು. ಅದು ಬಾಕಿ ಇರುವಾಗಲೇ 1995ರಲ್ಲಿ ಆದೇಶ ಹಿಂಪಡೆಯಲಾಗಿತ್ತು. ಸೇನಾ ನರ್ಸಿಂಗ್ ಸೇವೆಯಿಂದ ಲೆ. ಸೆಲಿನಾ ಅವರನ್ನು ಬಿಡುಗಡೆ ಮಾಡಿದ್ದು ತಪ್ಪು ಹಾಗೂ ಕಾನೂನುಬಾಹಿರ. ಅವರನ್ನು ಅದೇ ಹುದ್ದೆಗೆ ಮರು ನಿಯೋಜನೆ ಮಾಡಿಕೊಳ್ಳಬೇಕು ಎಂದು ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಆದೇಶಿಸಿತ್ತು. ಇದರ ವಿರುದ್ಧ ಕೇಂದ್ರ ಸರ್ಕಾರವು ಅರ್ಜಿ ಸಲ್ಲಿಸಿತ್ತು.

“ಮಿಲಿಟರಿ ನರ್ಸಿಂಗ್ ಸರ್ವಿಸ್‌ನಲ್ಲಿ ಕಾಯಂ ನಿಯುಕ್ತಿಗೊಂಡಿದ್ದ ಮಾಜಿ ಲೆ ಸೆಲಿನಾ ಜಾನ್ ಅವರನ್ನು ಮದುವೆ ಕಾರಣದಿಂದ ಕರ್ತವ್ಯದಿಂದ ಕಿತ್ತು ಹಾಕಿರುವುದನ್ನು ಸಮರ್ಥಿಸಿಕೊಳ್ಳುವ ಯಾವುದೇ ಹೇಳಿಕೆಯನ್ನು ನಾವು ಸ್ವೀಕರಿಸಲು ಸಾಧ್ಯವಿಲ್ಲ. ಈ ನಿಯಮವು ಮಹಿಳಾ ನರ್ಸಿಂಗ್ ಅಧಿಕಾರಿಗಳಿಗೆ ಮಾತ್ರ ಅನ್ವಯವಾಗುತ್ತಿದೆ. ಮಹಿಳೆ ಮದುವೆಯಾಗಿರುವ ಕಾರಣಕ್ಕೆ ಉದ್ಯೋಗದಿಂದ ವಜಾಗೊಳಿಸುವುದು ಲಿಂಗ ತಾರತಮ್ಯ ಹಾಗೂ ಅಸಮಾನತೆಯ ಪ್ರಕರಣವಾಗಿದೆ. ಅಂತಹ ಪುರುಷ ಪ್ರಧಾನ ನಿಯಮವನ್ನು ಒಪ್ಪಿಕೊಳ್ಳುವುದು ಮಾನವ ಘನತೆಯನ್ನು ತಗ್ಗಿಸುತ್ತದೆ, ತಾರತಮ್ಯರಹಿತ ಹಾಗೂ ನ್ಯಾಯೋಚಿತ ಪರಿಗಣನೆಯ ಹಕ್ಕನ್ನು ಕಡೆಗಣಿಸುತ್ತದೆ” ಎಂದು ಕೋರ್ಟ್ ಹೇಳಿದೆ.

Loading

Leave a Reply

Your email address will not be published. Required fields are marked *