ಚೆನ್ನೈ: ಊಳಿಗಮಾನ್ಯ ರಾಜಕೀಯ ಬಿಟ್ಟು ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವ ಯಾವುದೇ ರಾಜಕೀಯ ಮೈತ್ರಿಯನ್ನು ತಮ್ಮ ಪಕ್ಷ ಬೆಂಬಲಿಸುತ್ತದೆ ಎಂದು ಮಕ್ಕಳ್ ನೀಧಿ ಮೈಯಂ (MNM) ಸಂಸ್ಥಾಪಕ, ನಟ ಕಮಲ್ ಹಾಸನ್ (Kamal Haasan) ತಿಳಿಸಿದ್ದಾರೆ. ಚೆನ್ನೈನಲ್ಲಿ (Chennai) ಎಂಎನ್‌ಎಂನ 7ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ತಮ್ಮ ಪಕ್ಷವು ಇಂಡಿಯಾ ಒಕ್ಕೂಟದ ಭಾಗವಾಗುತ್ತಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು,
ನಮ್ಮ ಪಕ್ಷ ಇನ್ನೂ ಇಂಡಿಯಾ ಬ್ಲಾಕ್ʼಗೆ ಸೇರಿಲ್ಲ. ಪಕ್ಷ ರಾಜಕೀಯವನ್ನು ಸಮಾಧಿ ಮಾಡಿ ರಾಷ್ಟ್ರದ ಬಗ್ಗೆ ಯೋಚಿಸಬೇಕು ಎಂದು ನಾನು ಈಗಾಗಲೇ ಹೇಳಿದ್ದೇನೆ. ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವ ಯಾರಿಗೇ ಆಗಲಿ ನನ್ನ ಪಕ್ಷ ಬೆಂಬಲಿಸುತ್ತದೆ. ಆದರೆ ಸ್ಥಳೀಯ, ಊಳಿಗಮಾನ್ಯ ರಾಜಕೀಯವನ್ನು ಮುಂದುವರಿಸಿದರೆ ನಾವು ಅದರ ಭಾಗವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ತಮ್ಮ ಪಕ್ಷದ ಮೈತ್ರಿ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಆದಷ್ಟು ಬೇಗ ಒಳ್ಳೆಯ ಸುದ್ದಿಯನ್ನು ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಜೊತೆ ಹಾಸನ್ ಪಕ್ಷ ಮೈತ್ರಿ ಮಾತುಕತೆಯಲ್ಲಿ ತೊಡಗಿದೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಇದೀಗ ಸ್ವತಃ ಕಮಲ್ ಹಾಸನ್ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.