ರಾಮನಗರ: ಬಿಜೆಪಿ ಹಾಗೂ ಜೆಡಿಎಸ್ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವ್ರು ಅಶಾಂತಿ ಸೃಷ್ಟಿಸೋದು ಮಾಮೂಲಿ. ಕಮ್ಯೂನಲ್ ವಿಚಾರ ತೆಗೆದುಕೊಂಡು ರಾಜಕೀಯ ಮಾಡುತ್ತಾರೆ. ಅವರಿಗೆ ಮೈನಾರಿಟಿ ಅವರನ್ನು ಕಂಡರೆ ಆಗಲ್ಲ. ಸ್ಥಳೀಯ ಶಾಸಕ ಹಾಗೂ ಅಧಿಕಾರಿ ಮೈನಾರಿಟಿ ಇರುವುದರಿಂದ ರಾಜಕೀಯ ಮಾಡಿದ್ದಾರೆ. ಅಸೆಂಬ್ಲಿಯಲ್ಲೇ ಮೈನಾರಿಟಿ ಅಧಿಕಾರಿ ಬೇಡ ಎನ್ನುತ್ತಿದ್ದರು ಎಂದು ಅವರು ಕಿಡಿಕಾರಿದ್ದಾರೆ.
ರಾಮನಗರದಲ್ಲಿ ಡಿಕೆ ಸಹೋದರರಿಂದ ಅಶಾಂತಿ ಸೃಷ್ಟಿ ಎಂಬ ಆರೋಪಕ್ಕೆ, ರಾಮನಗರದಲ್ಲಿ ಗಲಾಟೆ ಮಾಡಿಸುತ್ತಿರುವುದೇ ಜೆಡಿಎಸ್. ಆ ಎಲ್ಲಾ ಗಲಾಟೆಗೆ ಕುಮಾರಸ್ವಾಮಿ ಹಾಗೂ ಬಿಜೆಪಿಯೇ ಕಾರಣ ಎಂದು ಅವರು ಆರೋಪಿಸಿದ್ದಾರೆ. ಲೋಕಸಭಾ ಚುನಾವಣೆಗೆ ತಯಾರಿ ವಿಚಾರವಾಗಿ, ನಾವು ಕಳೆದ ಚುನಾವಣೆ ಮುಗಿದ ಮರುದಿನದಿಂದಲೇ ಕೆಲಸ ಆರಂಭಿಸಿದ್ದೇವೆ. ನಮ್ಮನ್ನ ಕಟ್ಟಿ ಹಾಕ್ತಿವಿ ಅಂತಿದ್ದಾರಲ್ಲ ನೋಡೋಣ, ಕಟ್ಟಿಹಾಕಲಿ ಎಂದು ಸವಾಲು ಹಾಕಿದ್ದಾರೆ.