ಮ್ಯಾನ್ಮಾರ್: ಮೂವರು ಉನ್ನತ ಸೇನಾಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ

ಯಾಂಗಾನ್: ಬಂಡುಗೋರ ಪಡೆಗಳಿಗೆ ಶರಣಾಗಿ ಆಯಕಟ್ಟಿನ ನಗರವನ್ನು ಹಸ್ತಾಂತರಿಸಿ ಸೇನೆಗೆ ಮುಖಭಂಗ ಉಂಟುಮಾಡಿರುವ ಮೂವರು ಉನ್ನತ ಸೇನಾಧಿಕಾರಿಗಳಿಗೆ ಮ್ಯಾನ್ಮಾರ್ ಸೇನಾಡಳಿತ ಮರಣದಂಡನೆ ಶಿಕ್ಷೆ ವಿಧಿಸಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.

ಮ್ಯಾನ್ಮಾರ್‌ ನ ಉತ್ತರದಲ್ಲಿ ಚೀನಾ ಗಡಿಯ ಸನಿಹದ ಶಾನ್ ರಾಜ್ಯದ ಲೌಕ್ಕಾನಿ ನಗರವನ್ನು ಕೆಲ ತಿಂಗಳ ಹಿಂದೆ `ತ್ರೀ ಬದರ್‍ಹುಡ್ ಅಲಯನ್ಸ್’ ಎಂದು ಕರೆಯಲಾಗುವ ಮೂರು ಬಂಡುಗೋರ ಪಡೆಗಳ ಒಕ್ಕೂಟ ವಶಕ್ಕೆ ಪಡೆದಿತ್ತು.

ಮ್ಯಾನ್ಮಾರ್ ನ್ಯಾಷನಲ್ ಡೆಮೊಕ್ರಟಿಕ್ ಅಲಯನ್ಸ್ ಆರ್ಮಿ(ಎಂಎನ್‍ಡಿಎಎ), ದಿ ಅರಾಕನ್ ಆರ್ಮಿ(ಎಎ) ಮತ್ತು ದಿ ತಾಂಗ್ ನ್ಯಾಷನಲ್ ಲಿಬರೇಷನ್ ಆರ್ಮಿ(ಟಿಎನ್‍ಎಲ್‍ಎ) ಪಡೆಗಳ ಒಕ್ಕೂಟವು ಅಕ್ಟೋಬರ್‌ ನಲ್ಲಿ ಉತ್ತರ ಮ್ಯಾನ್ಮಾರ್‌ ನ ಹಲವು ಪ್ರಮುಖ ನಗರಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಚೀನಾ ಗಡಿಭಾಗದ ಸನಿಹದಲ್ಲಿರುವ ಈ ನಗರಗಳು ಚೀನಾದೊಂದಿಗಿನ ವ್ಯಾಪಾರ ವಹಿವಾಟಿಗೆ ಪ್ರಮುಖ ಮಾರುಕಟ್ಟೆಯಾಗಿವೆ.

ಬಂಡುಗೋರರ ಕೈ ಮೇಲಾಗುತ್ತಿರುವಂತೆಯೇ ನೂರಾರು ಯೋಧರು ತಮ್ಮ ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗಿದ್ದರು. ಬಳಿಕ ಅವರನ್ನು ನಗರದಿಂದ ಹೊರಹೋಗಲು ಅವಕಾಶ ನೀಡಲಾಗಿದೆ. ಈ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸಿದ್ದ ಮೂವರು ಸೇನಾಧಿಕಾರಿಗಳಿಗೆ ಇದೀಗ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ಸೇನಾಡಳಿತದ ವಕ್ತಾರರು ತಿಳಿಸಿದ್ದಾರೆ.

Loading

Leave a Reply

Your email address will not be published. Required fields are marked *