ಮಂಡ್ಯ: ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಕ್ಕರೆ ನಾಡು ಎಷ್ಟು ಸದ್ದನ್ನು ಮಾಡಿತ್ತು . ಈ ಬಾರಿಯೂ ಕ್ಷೇತ್ರದ ಚುನಾವಣೆ ಅದೇ ರೀತಿ ಸದ್ದು ಮಾಡುತ್ತಿದೆ. ದೆಹಲಿಯಲ್ಲಿ ಬಿಜೆಪಿಯ ವರಿಷ್ಠರನ್ನು ಹಲವು ಬಾರಿ ಭೇಟಿಯಾಗಿರುವ ಸುಮಲತಾ ಟಿಕೆಟ್ ತಮಗೇ ಸಿಗುವ ಖಾತ್ರಿಯಲ್ಲಿದ್ದಾರೆ. ಇನ್ನೊಂದು ಕಡೆ, ಇವರ ಹೆಸರು ಕಾಂಗ್ರೆಸ್ ಪಟ್ಟಿಯಲ್ಲೂ ಇದೆ ಎನ್ನುವ ಅಂತೆಕಂತೆ ಸುದ್ದಿಗಳೂ ಹರಿದಾಡುತ್ತಿವೆ. ಇವೆಲ್ಲದರ ಮಧ್ಯೆ, ಜೆಡಿಎಸ್ ನಾಯಕ ಸಿ.ಎಸ್.ಪುಟ್ಟರಾಜು, ಗೌಡ್ರ ಅಳಿಯ ಡಾ. ಮಂಜುನಾಥ್ ಅವರ ಹೆಸರನ್ನು ಪ್ರಸ್ತಾವಿಸಿದ್ದಾರೆ.
ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕಾರ್ಯಕ್ರಮದಲ್ಲಿ ಮಾತನಾಡಿದ ಪುಟ್ಟರಾಜು ಅವರು ಆರೋಗ್ಯ ಕ್ಷೇತ್ರದಲ್ಲಿ ಡಾ. ಮಂಜುನಾಥ್ ಅಪಾರ ಸಾಧನೆ ಮಾಡಿದ್ದಾರೆ. ಅವರು ಮೂಲತಃ ಹಾಸನ ಜಿಲ್ಲೆಯವರಾದ್ರೂ ಅವರ ರೈಸ್‌ಮಿಲ್, ತೋಟ, ಭೂಮಿ ಇರೋದೆಲ್ಲಾ ಮಂಡ್ಯ ಜಿಲ್ಲೆಯಲ್ಲಿ. ಅವರು ಓದಿದ್ದು ಅವರ ಸಂಬಂಧಿಕರು ಇರೋದು ಕೂಡ ಮಂಡ್ಯ ಜಿಲ್ಲೆಯಲ್ಲಿ. ಹೀಗಾಗಿ ಮಂಜುನಾಥ್ ಅವರೇ ಮಂಡ್ಯದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಗಲಿ ಎಂದಿದ್ದಾರೆ.
ಇನ್ನೂ ಮುಂದುವರಿದು ಮಾತನಾಡಿರುವ ಪುಟ್ಟರಾಜು ಅವರು ಡಾ. ಸಿ.ಎನ್ ಮಂಜುನಾಥ್ ಅವರು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡಿ ದೇಶ, ವಿದೇಶದಲ್ಲಿ ಹೆಸರುವಾಸಿಯಾಗಿದ್ದಾರೆ. ಮಂಜುನಾಥ್ ಅವರೇ ಮಂಡ್ಯ ಲೋಕಸಭೆ ಅಭ್ಯರ್ಥಿ ಆಗಲಿ. ಚುನಾವಣೆಯಲ್ಲಿ ಗೆದ್ದು ಕೇಂದ್ರ ಆರೋಗ್ಯ ಸಚಿವರಾದರೆ ಅವರ ಸೇವೆ ಇಡೀ ರಾಷ್ಟ್ರಕ್ಕೂ ಸಿಗಲಿದೆ. ಈ ನಿಟ್ಟಿನಲ್ಲಿ ನಿರ್ಮಲಾನಂದನಾಥ ಶ್ರೀಗಳು ಆಶೀರ್ವಾದ ಮಾಡಬೇಕು ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ಸಿಗಾಗಲಿ ಒಬ್ಬರಿಗೊಬ್ಬರಿಗೆ ಮಂಡ್ಯ ಕ್ಷೇತ್ರವನ್ನು ಬಿಟ್ಟು ಕೊಡಲು ಮನಸ್ಸಿಲ್ಲ. ಇನ್ನೊಂದು ಕಡೆ, ಸುಮಲತಾ ಇಲ್ಲಿನ ಮಣ್ಣಿನ ಖುಣದ ಬಗ್ಗೆ ಮಾತನಾಡಿದ್ದಾರೆ. ಡಾ. ಮಂಜುನಾಥ್ ಅವರ ಹೆಸರು ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಉತ್ತರ ಕ್ಷೇತ್ರದಿಂದ ಕೇಳಿ ಬರುತ್ತಿದೆ. ಈಗ, ಮಂಡ್ಯ ಜಿಲ್ಲೆಯ ಪ್ರಬಾವೀ ಮುಖಂಡ ಮತ್ತು ದೇವೇಗೌಡ್ರ ಕುಟುಂಬಕ್ಕೆ ಆತ್ಮೀಯರಾಗಿರುವ ಸಿ.ಎಸ್.ಪುಟ್ಟರಾಜು ಅವರು ಡಾ. ಮಂಜುನಾಥ್ ಅವರ ಹೆಸರನ್ನು ಮಂಡ್ಯಕ್ಕೆ ಎಳೆಯುವ ಮೂಲಕ, ಅಭ್ಯರ್ಥಿ ಆಯ್ಕೆ ಇನ್ನಷ್ಟು ಕುತೂಹಲವಾಗುವಂತೆ ಅಥವಾ ಜಟಿಲವಾಗುವಂತೆಯೋ ಮಾಡಿದ್ದಾರೆ.