ಕಮಲ್ ನಾಥ್ ನಂತರ, ಮನೀಶ್ ತಿವಾರಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸಾಧ್ಯತೆ

ನವದೆಹಲಿ: ಮಧ್ಯಪ್ರದೇಶದ ಕಾಂಗ್ರೆಸ್‌ ಮಾಜಿ ಮುಖ್ಯಮಂತ್ರಿ ಕಮಲನಾಥ್ ಮತ್ತು ಅವರ ಪುತ್ರ ನಕುಲ್‌ನಾಥ್ ಬಿಜೆಪಿ ಸೇರ್ಪಡೆಯಾಗುವ ವದಂತಿಗಳ ನಡುವೆ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಮಂತ್ರಿ ಮನೀಶ್ ತಿವಾರಿ ಕೂಡಾ ಬಿಜೆಪಿ ಸೇರ್ಪಡೆಯಾಗುವ ಗುಲ್ಲೆದ್ದಿದೆ. ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನ ಲೂಧಿಯಾನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಹೊರ ಬಂದ ಬೆನ್ನಲ್ಲೇ ತಿವಾರಿ ಕಚೇರಿಯಿಂದ ಸ್ಪಷ್ಟನೆ ನೀಡಿದ್ದು, ಮನೀಶ್ ಅವರು ಬಿಜೆಪಿ ಸೇರ್ಪಡೆಯಾಗುವ ಸುದ್ದಿ ಸುಳ್ಳು ಎಂದು ಹೇಳಿದೆ. ಅವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹ ಆಧಾರ ರಹಿತವಾಗಿದೆ. ಮನೀಶ್ ತಿವಾರಿ (Manish Tiwari) ಅವರು ತಮ್ಮ ಕ್ಷೇತ್ರದಲ್ಲಿದ್ದಾರೆ, ಅಲ್ಲಿ ಅವರು ಅಭಿವೃದ್ಧಿ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ನಿನ್ನೆ ರಾತ್ರಿ ಅವರು ಕಾಂಗ್ರೆಸ್ (Congress) ಕಾರ್ಯಕರ್ತರ ಮನೆಯಲ್ಲಿ ತಂಗಿದ್ದರು ಎಂದು ತಿಳಿಸಿದೆ.

ಇದಕ್ಕೂ ಮೊದಲು ಲೋಕಸಭಾ ಚುನಾವಣೆಗೆ (Loksabha Election) ಮುನ್ನ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್, ಅವರ ಪುತ್ರ ನಕುಲ್ ಮತ್ತು ಇತರ ಸಂಸದರು ಬಿಜೆಪಿ ಸೇರಬಹುದು ಎನ್ನಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ, ಇದು ಆಧಾರರಹಿತ ವದಂತಿ ಎಂದು ತಳ್ಳಿಹಾಕಿದರು. ಕಮಲ್ ನಾಥ್ ಅವರು ತಮ್ಮ ಕನಸಿನಲ್ಲಿಯೂ ಸಹ ಬಿಜೆಪಿಗೆ ಸೇರುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕಳೆದ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಪ್ರದರ್ಶನದ ನಂತರ ಕಮಲ್ ನಾಥ್ ಅವರನ್ನು ಇತ್ತೀಚೆಗೆ ಕಾಂಗ್ರೆಸ್‌ನ ಮಧ್ಯಪ್ರದೇಶ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಸದ್ಯ ಅವರು ರಾಜ್ಯಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಅವರನ್ನು ಪರಿಗಣಿಸದ ಹಿನ್ನೆಲೆ ಅತೃಪ್ತಗೊಂಡಿರುವ ಅವರು ಪುತ್ರ ಹಾಗೂ ಬೆಂಬಲಿಗರ ಸಮೇತ ಬಿಜೆಪಿ ಸೇರಬಹುದು ಎನ್ನಲಾಗಿತ್ತು. ಈ ಬಗ್ಗೆ ಮಾತನಾಡಿದ ಕಮಲ್‌ ನಾಥ್ ಅಂತಹ ವಿಚಾರ ಇದ್ದರೆ ನಿಮಗೆ ತಿಳಿಸುವೆ ಎಂದಿರುವ ಅವರು ಬಿಜೆಪಿ ಸೇರ್ಪಡೆಯನ್ನು ನಿರಾಕರಿಸಿಲ್ಲ.

 

Loading

Leave a Reply

Your email address will not be published. Required fields are marked *