ನವದೆಹಲಿ: ಖ್ಯಾತ ಜೈನ ಮುನಿಗಳಾದ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಅವರು ಇಂದು ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಆಚಾರ್ಯ ವಿದ್ಯಾಸಾಗರ ಮಹಾರಾಜರಿಗೆ 77 ವರ್ಷ ವಯಸ್ಸಾಗಿತ್ತು. ಇವರು ಛತ್ತೀಸ್ಗಢದ ಡೊಂಗರ್ಗಢ್ನ ಚಂದ್ರಗಿರಿ ತೀರ್ಥದಲ್ಲಿ ಭಾನುವಾರ ಮುಂಜಾನೆ ನಿಧನರಾದರು. ವಿದ್ಯಾಸಾಗರ ಮಹಾರಾಜರ ನಿಧನದ ಹಿನ್ನೆಲೆಯಲ್ಲಿ ಸರ್ಕಾರದಿಂದ ಅರ್ಧ ದಿನ ರಜೆ ಘೋಷಿಸಲಾಗಿದೆ.
ಪ್ರಧಾನಿ ಟ್ವೀಟ್: ಆಚಾರ್ಯ ಶ್ರೀ 108 ವಿದ್ಯಾಸಾಗರ್ ಜಿ ಮಹಾರಾಜ್ ಅವರು ಸಮಾಜಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ವಿಶೇಷವಾಗಿ ಜನರಲ್ಲಿ ಆಧ್ಯಾತ್ಮಿಕ ಜಾಗೃತಿಗಾಗಿ ಅವರು ಮಾಡಿದ ಪ್ರಯತ್ನಗಳು, ಬಡತನ ನಿವಾರಣೆ, ಆರೋಗ್ಯ ರಕ್ಷಣೆ, ಶಿಕ್ಷಣ ಹೀಗೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದ್ದಾರೆ. ಹೀಗೆ ಅವರು ಮಾಡಿದ ಉತ್ತಮ ಕೆಲಸಗಳಿಂದಾಗಿ ಅವರನ್ನು ಮುಂದಿನ ಪೀಳಿಗೆಯವರು ನೆನಪಿಸಿಕೊಳ್ಳುತ್ತಾರೆ.
ವರ್ಷಗಳ ಕಾಲ ಅವರ ಆಶೀರ್ವಾದ ಪಡೆಯುವ ಗೌರವ ನನಗಿತ್ತು. ಕಳೆದ ವರ್ಷದ ಕೊನೆಯಲ್ಲಿ ಛತ್ತೀಸ್ಗಢದ ಡೊಂಗರ್ಗಢ್ನಲ್ಲಿರುವ ಚಂದ್ರಗಿರಿ ಜೈನ ಮಂದಿರಕ್ಕೆ ನಾನು ಭೇಟಿ ನೀಡಿದ್ದು, ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಸಮಯದಲ್ಲಿ ನಾನು ಆಚಾರ್ಯ ಶ್ರೀ 108 ವಿದ್ಯಾಸಾಗರ್ ಮಹಾರಾಜ್ ಅವರೊಂದಿಗೆ ಸಮಯ ಕಳೆದಿದ್ದೇನೆ ಮತ್ತು ಅವರ ಆಶೀರ್ವಾದವನ್ನು ಸಹ ಪಡೆದಿದ್ದೇನೆ ಎಂದು ಅವರು ಹೇಳಿದರು.