ನವದೆಹಲಿ: ಚುನಾವಣಾ ಬಾಂಡ್ಗಳ ಯೋಜನೆ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಚುನಾವಣಾ ಬಾಂಡ್ಗಳ (ಎಲೆಕ್ಟೋರಲ್) ಕಾನೂನಿನ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ. ಸರ್ಕಾರ ಹಾಗೂ ಅರ್ಜಿದಾರರ ನಡುವಿನ ವಾದ-ಪ್ರತಿವಾದ ಆಲಿಸಿದ್ದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ (DY Chandrachud) ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠವು ಕಳೆದ ನವೆಂಬರ್ನಲ್ಲಿ ತೀರ್ಪು ಕಾಯ್ದಿರಿಸಿತ್ತು.
ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಕಪ್ಪುಹಣದ (Black Money) ವಿರುದ್ಧ ಹೋರಾಡುವ ಉದ್ದೇಶ ಮತ್ತು ದಾನಿಗಳ ಗೌಪ್ಯತೆಯನ್ನು ಕಾಪಾಡುವುದು ಯೋಜನೆಯನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಚುನಾವಣಾ ಬಾಂಡ್ಗಳು ಕಪ್ಪುಹಣವನ್ನು ತಡೆಯುವ ಏಕೈಕ ಮಾರ್ಗವಲ್ಲ ಎಂದು ಹೇಳಿ ಯೋಜನೆಯನ್ನೇ ರದ್ದು ಪಡಿಸಿದೆ.
ತನ್ನ ತೀರ್ಪಿನಲ್ಲಿ ಯೋಜನೆಯು ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ. ಇದರಿಂದ ಕಪ್ಪು ಹಣ ನಿಗ್ರಹವಾಗುವುದಿಲ್ಲ ಎಂದು ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಕ್ಷಣವೇ ಚುನಾವಣಾ ಬಾಂಡ್ ನೀಡುವುದನ್ನು ನಿಲ್ಲಿಸಬೇಕು. ಚುನಾವಣಾ ಬಾಂಡ್ಗಳನ್ನು ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ಎಸ್ಬಿಐ ನೀಡಬೇಕು. ಮಾರ್ಚ್ 13 ರೊಳಗೆ ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಆ ವಿವರಗಳನ್ನು ಪ್ರಕಟಿಸಬೇಕು ಎಂದು ಮಹತ್ವದ ಆದೇಶ ಪ್ರಕಟಿಸಿದೆ. 2018ರಲ್ಲಿ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಪರಿಚಯಿಸಿತ್ತು.