ರಾಜ್ಕೋಟ್: ಇದೇ ಫೆ.15ರಿಂದ ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾ ಬ್ಯಾಟಿಂಗ್ ಪಿಲ್ಲರ್ ಕೆ.ಎಲ್ ರಾಹುಲ್ ಹೊರಗುಳಿದಿದ್ದಾರೆ. ಆದ್ರೆ ಕೆ.ಎಲ್ ರಾಹುಲ್ (KL Rahul) ಅವರ ಸ್ಥಾನಕ್ಕೆ ಬಿಸಿಸಿಐ (BCCI) ಮತ್ತೊಬ್ಬ ಕನ್ನಡಿಗನಿಗೆ ಮಣೆ ಹಾಕಿದೆ.
ಇಂಗ್ಲೆಂಡ್ ವಿರುದ್ಧದ 3ನೇ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲು ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರನ್ನು ಫಿಟ್ನೆಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಜಡೇಜಾ ಪಾಲ್ಗೊಳ್ಳುವಿಕೆಗೆ ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದ್ದು, ಫಿಟ್ನೆಸ್ ಸಾಬೀತುಪಡಿಸುವಲ್ಲಿ ವಿಫಲರಾದ ಕೆ.ಎಲ್ ರಾಹುಲ್ ಅವರನ್ನು ಪಂದ್ಯದಿಂದ ಹೊರಗಿಡಲಾಗಿದೆ. ಅಲ್ಲದೇ ಕೆ.ಎಲ್ ರಾಹುಲ್ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗನನ್ನೇ ಆದ ದೇವದತ್ ಪಡಿಕ್ಕಲ್ (Devdutt Padikkal) ಅವರಿಗೆ ಸ್ಥಾನ ನೀಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಸದ್ಯ ವಿರಾಟ್ ಕೊಹ್ಲಿ (Virat Kohli) ಅವರ ಅನುಪಸ್ಥಿತಿಯಿಂದ ಟೀಂ ಇಂಡಿಯಾಕ್ಕೆ ಬ್ಯಾಟಿಂಗ್ ಬಲದ ಕೊರತೆಯಾಗಿದೆ. ಅನುಭವಿ ಅಗ್ರಕ್ರಮಾಂಕದಲ್ಲಿ ಕೊಹ್ಲಿ ಅವರ ಸ್ಥಾನ ತುಂಬಲು ಕೆ.ಎಲ್ ರಾಹುಲ್ ಅವರನ್ನು ತಂಡಕ್ಕೆ ಕರೆತರುವ ಉತ್ಸಾಹದಲ್ಲಿ ಬಿಸಿಸಿಐ ಇತ್ತು. ಆದ್ರೆ ಕೆ.ಎಲ್ ರಾಹುಲ್ ಅವರು ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಬಲತೋಡೆಯ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಸದ್ಯ ಕೆ.ಎಲ್ ರಾಹುಲ್ ಅವರು ಸಂಪೂರ್ಣ ಫಿಟ್ ಇರುವುದು ಕಂಡುಬಂದಿಲ್ಲ. ಹಾಗಾಗಿ ರಾಹುಲ್ ಅವರನ್ನು ಇನ್ನೂ ಒಂದು ವಾರಗಳ ಕಾಲ ಅವರನ್ನು ವೈದ್ಯಕೀಯ ಮೇಲ್ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ