ನವದೆಹಲಿ: ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಸಂಪೂರ್ಣ ಜ್ಞಾನವಾಪಿ ಮಸೀದಿ ಆವರಣವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಸಮೀಕ್ಷೆ ನಡೆಸುವಂತೆ ಮಾಡಿದ ಮನವಿಯನ್ನು ಆಲಿಸಲು ಇಲ್ಲಿನ ನ್ಯಾಯಾಲಯ ಮಂಗಳವಾರ ಒಪ್ಪಿಗೆ ನೀಡಿದೆ.
ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ ಕೆ ವಿಶ್ವೇಶ್ ಅವರು ಜ್ಞಾನವಾಪಿ ಮಸೀದಿ ಸಮಿತಿಗೆ ಮೇ 19 ರೊಳಗೆ ಉತ್ತರವನ್ನು ಸಲ್ಲಿಸುವಂತೆ ಸೂಚಿಸಿದರು ಎಂದು ಜಿಲ್ಲಾ ಸರ್ಕಾರಿ ವಕೀಲ ಮಹೇಂದ್ರ ನಾಥ್ ಪಾಂಡೆ ಹೇಳಿದರು.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 22ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.
ಶುಕ್ರವಾರ, ಅಲಹಾಬಾದ್ ಹೈಕೋರ್ಟ್ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಎಂದು ಹೇಳಲಾದ ರಚನೆಯ ವಯಸ್ಸನ್ನು ನಿರ್ಧರಿಸಲು ಆದೇಶಿಸಿದೆ. ನ್ಯಾಯಾಲಯದ ಆದೇಶದ ಪ್ರಕಾರ ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ಸಂದರ್ಭದಲ್ಲಿ ಮೇ 2022 ರಲ್ಲಿ ಪತ್ತೆಯಾದ ರಚನೆಯ ಕಾರ್ಬನ್ ಡೇಟಿಂಗ್ ಸೇರಿದಂತೆ ವೈಜ್ಞಾನಿಕ ತನಿಖೆಯ ಮನವಿಯನ್ನು ತಿರಸ್ಕರಿಸಿದ ವಾರಣಾಸಿ ಜಿಲ್ಲಾ ನ್ಯಾಯಾಲಯದ ಅಕ್ಟೋಬರ್ 14 ರ ಆದೇಶವನ್ನು ಅದು ರದ್ದುಗೊಳಿಸಿತು.
‘ಶಿವಲಿಂಗ’ದ ವೈಜ್ಞಾನಿಕ ತನಿಖೆಯನ್ನು ನಡೆಸುವಂತೆ ಹಿಂದೂ ಆರಾಧಕರು ಸಲ್ಲಿಸಿದ ಅರ್ಜಿಯನ್ನು ಕಾನೂನಿನ ಪ್ರಕಾರ ಮುಂದುವರಿಸಲು ವಾರಣಾಸಿ ಜಿಲ್ಲಾ ನ್ಯಾಯಾಧೀಶರಿಗೆ ಹೈಕೋರ್ಟ್ ನಿರ್ದೇಶಿಸಿ, ರಚನೆಯ ವಯಸ್ಸನ್ನು ನಿರ್ಧರಿಸಲು ದಾರಿ ಮಾಡಿಕೊಟ್ಟಿತು.