ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಇತ್ತೀಚೆಗೆ ಬಹಿರಂಗಪಡಿಸಿದ್ದರು. ಆದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಎಬಿ ಡಿವಿಲಿಯರ್ಸ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ನಾನು ನನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದಂತೆ ಕುಟುಂಬ ಮೊದಲ ಆದ್ಯತೆಯಾಗಿದೆ. ಅದೇ ಸಮಯದಲ್ಲಿ ನಾನು ದೊಡ್ಡ ತಪ್ಪೊಂದನ್ನು ಮಾಡಿದ್ದೇನೆ, ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದೆ. ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ (Virat Kohli- Anushka Sharma) 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿದ್ದೇನೆ. ಇದಕ್ಕಾಗಿ ಕ್ಷಮೆ ಇರಲಿ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಎಬಿ ಡಿವಿಲಿಯರ್ಸ್ ಹೇಳಿದ್ದೇನು..?: ನಾನು ವಿಡಿಯೋ ಮೂಲಕ ಕುಟುಂಬ ಮೊದಲು ಎಂದು ಹೇಳಿದ್ದೆ. ಇದು ಸತ್ಯ ಕೂಡ. ಇದೇ ವೇಳೆ ಮಾತು ಮುಂದುವರಿಸಿ ಕೊಹ್ಲಿ ಹಾಗೂ ಅನುಷ್ಕಾ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅಂತಾ ಹೇಳಿದ್ದೆ. ಆದರೆ ಈ ಮಾಹಿತಿ ತಪ್ಪಾಗಿದೆ. ವಿರಾಟ್ ಕೊಹ್ಲಿ ಅವರ ಕುಟುಂಬದ ಜೊತೆಗಿದ್ದಾರೆ. ಕೊಹ್ಲಿ ಟೆಸ್ಟ್ ಪಂದ್ಯಕ್ಕೆ ಗೈರಾಗಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕೊಹ್ಲಿ ವಿಶ್ರಾಂತಿಗೆ ಕಾರಣ ಏನೇ ಇರಬಹುದು. ಆದರೆ ಅವರಿಗೆ ನಾನು ಶುಭ ಹಾರೈಸುತ್ತೇನೆ. ವಿಶ್ರಾಂತಿ ಬಳಿಕ ವಿರಾಟ್ ಕೊಹ್ಲಿ ಮತ್ತಷ್ಟು ಪವರ್ಫುಲ್ ಆಗಿ ಕಮ್ಬ್ಯಾಕ್ ಮಾಡಲಿದ್ದಾರೆ ಎಂದು ಹೇಳುವ ಮೂಲಕ ಎಬಿ ಡಿವಿಲಿಯರ್ಸ್ (AB de Villiers) ಸ್ಪಷ್ಟನೆ ಕೊಟ್ಟಿದ್ದಾರೆ.
ನವೆಂಬರ್ 2023 ರಲ್ಲಿ ಅನುಷ್ಕಾ ಅವರ ಎರಡನೇ ಗರ್ಭಧಾರಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳು ಹರಿದಾಡಿದವು. ವಿಶೇಷವಾಗಿ ನೆದರ್ಲ್ಯಾಂಡ್ಸ್ ವಿರುದ್ಧ ಟೀಮ್ ಇಂಡಿಯಾದ ವಿಶ್ವಕಪ್ ಪಂದ್ಯದ ಮೊದಲು ಬೆಂಗಳೂರಿನಲ್ಲಿ ನಡೆದ ದೀಪಾವಳಿ ಬ್ಯಾಷ್ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಅನುಷ್ಕಾ ಅವರ ಗರ್ಭಿಣಿ ಎಂದು ಕೆಲ ಬೇಬಿ ಬಂಪ್ ಫೋಟೋಗಳು ವೈರಲ್ ಆದವು. ವಿರಾಟ್ ಮತ್ತು ಅನುಷ್ಕಾ 2017ರ ಡಿಸೆಂಬರ್ 11 ರಂದು ಇಟಲಿಯಲ್ಲಿ ವಿವಾಹವಾದರು. 2021ರ ಜನವರಿ 11 ರಂದು ವಾಮಿಕಾ ಹುಟ್ಟಿದಳು.