ಬೆಂಗಳೂರು: ಇಂಡಿಯನ್ ಹಾಕಿ ಟೀಂ ಪ್ಲೇಯರ್ ಮೇಲೆ ಬೆಂಗಳೂರಲ್ಲಿ ಎಫ್ ಐ ಆರ್ ದಾಖಲಾಗಿದೆ. ಹೌದು ಭಾರತ ಹಾಕಿ ತಂಡದ ಡಿಫೆಂಡರ್ ಆಟಗಾರ ವರುಣ್ ಕುಮಾರ್ ಮದುವೆಯಾಗೋದಾಗಿ ನಂಬಿಸಿ ಸ್ಟಾರ್ ಆಟಗಾರ್ತಿಗೆ ಮೋಸ ಮಾಡಿರುವ ಆರೋಪ ಕೇಳಿ ಬಂದಿದ್ದು, ಪ್ರತಿಷ್ಠಿತ ಕ್ರೀಡೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಯುವತಿಯ ಮೇಲೆ ಭಾರತೀಯ ಹಾಕಿ ತಂಡದ ಡಿಫೆಂಡರ್ ವರುಣ್ ಕುಮಾರ್ ಅತ್ಯಾಚಾರ ನಡೆಸಿದ್ದಾರೆ ಎಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ.
ಜ್ಙಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟ್ರೈನಿಂಗ್ ಪಡೆಯುವಾಗ ವರುಣ್ ಕುಮಾರ್ಗೆ ಇನ್ಸ್ಟಾ ಮೂಲಕ ಯುವತಿಯ ಪರಿಚಯವಾಗಿತ್ತು. ಯುವತಿ 17 ವರ್ಷದವಳಾಗಿದ್ದಾಗಲೇ ಪ್ರೀತಿ (Love) ಮಾಡುವಂತೆ ಹಿಂದೆ ಬಿದ್ದಿದ್ದ ವರುಣ್ ಕುಮಾರ್ ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ. 2019 ರಿಂದ ಯುವತಿ ಜೊತೆಗೆ ಸಂಪರ್ಕದಲ್ಲಿದ್ದ ವರುಣ್ ಕುಮಾರ್ ಐದು ವರ್ಷಗಳಿಂದ ಹಲವಾರು ಬಾರಿ ಅತ್ಯಾಚಾರ ನಡೆಸಿದ್ದು, ಈಗ ಮದುವೆಯಾಗದೇ ವಂಚಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ವರುಣ್ ಕುಮಾರ್ ವಿರುದ್ಧ ಪೋಕ್ಸೋ, ಅತ್ಯಾಚಾರ ಹಾಗೂ ವಂಚನೆ ಕೇಸ್ ಅಡಿ ಎಫ್ಐಆರ್ ದಾಖಲಾಗಿದೆ. ಜಲಂಧರ್ನಲ್ಲಿರುವ ವರುಣ್ಗಾಗಿ ಜ್ಞಾನಭಾರತಿ ಪೊಲೀಸರು ಬಲೆ ಬೀಸಿದ್ದಾರೆ.