ಮೂಲವ್ಯಾಧಿ ಸಮಸ್ಯೆ ಬಂದ ನಂತರದಲ್ಲಿ ಮನುಷ್ಯನ ಜೀವನ ಒಂದು ರೀತಿಯ ವಿಪರೀತ ಬೇಸರವನ್ನು ಉಂಟುಮಾಡುವ ಜೀವನ ಆಗಿಬಿಡುತ್ತದೆ. ಇತರರ ಮುಂದೆ ಕಿರಿಕಿರಿ ಆಗುವುದಂತೂ ಸತ್ಯ.
ಮೂಲವ್ಯಾಧಿ ಸಮಸ್ಯೆಯಿಂದ ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯವಾಗುವುದಿಲ್ಲ ಎಂಬುದು ಹಲವರ ವಾದ. ಅದೇನೇ ಇರಲಿ. ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗದಂತೆ ನೋಡಿಕೊಂಡರೆ ಸಾಕು.
ಮೂಲವ್ಯಾಧಿ ಬರಲು ಕಾರಣಗಳೇನು, ಬಂದ ನಂತರದಲ್ಲಿ ಹೇಗಿರಬೇಕು ಮತ್ತು ಬರದಂತೆ ತಡೆಯಲು ಏನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಇಲ್ಲಿ ವೈದ್ಯರ ಮಾತಿನಲ್ಲಿ ತಿಳಿಸಿಕೊಡಲಾಗಿದೆ.
ಮೂಲವ್ಯಾಧಿ ಚಳಿಗಾಲದಲ್ಲಿ ನಿಜವಾಗಲೂ ಹೆಚ್ಚಾಗುತ್ತಾ?
ಕೆಲವೊಂದು ಕಾರಣಗಳಿಂದ ಚಳಿಗಾಲದಲ್ಲಿ ಪೈಲ್ಸ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಉದಾಹರಣೆಗೆ ಗರ್ಭಾವಸ್ಥೆ, ಬೊಜ್ಜು, ಮಾನಸಿಕ ಒತ್ತಡ ಮತ್ತು ಅನುವಂಶಿಯ ಕಾರಣಗಳಿಂದಲೂ ಕೂಡ ಮೂಲವ್ಯಾಧಿ ಅಭಿವೃದ್ಧಿ ಯಾಗುತ್ತದೆ. ಪೈಲ್ಸ್ ಹೆಚ್ಚಾದಾಗ ಗುದದ್ವಾರದಿಂದ ರಕ್ತಸ್ರಾವ ಉಂಟಾಗುವುದು, ಕೆರೆತ, ನೋವು, ಅಸ್ವಸ್ಥತೆ ಹೆಚ್ಚಾಗುತ್ತದೆ.
ಪೈಲ್ಸ್‌ನಿಂದ ಪರಿಹಾರ ಪಡೆಯುವುದು ಹೇಗೆ?
ಚಳಿಗಾಲದಲ್ಲಿ ತಾಪಮಾನ ಕಡಿಮೆಯಾದಾಗ, ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಮತ್ತು ರಕ್ತದ ಹರಿವಿನಲ್ಲಿ ಅಡಚಣೆ ಉಂಟಾಗುತ್ತದೆ. ಅದರ ಗಂಭೀರ ರೋಗಲಕ್ಷಣಗಳನ್ನು ತಡೆಗಟ್ಟಲು ಪೈಲ್ಸ್ ರೋಗಿಗಳು ವಿಶೇಷ ಕಾಳಜಿ ವಹಿಸಬೇಕು.
ಫೈಬರ್ ಭರಿತ ಆಹಾರವನ್ನು ತೆಗೆದುಕೊಳ್ಳಿ
ಫೈಬರ್ ಜೀರ್ಣಕ್ರಿಯೆಗೆ ಮಾತ್ರವಲ್ಲ, ಕರುಳಿನ ಚಲನೆಯನ್ನು ನಿಯಂತ್ರಿಸುವ ಮೂಲಕ ಪೈಲ್ಸ್‌ಗೆ ಸಹಾಯ ಮಾಡುತ್ತದೆ. ಇದು ಅವಶ್ಯಕವಾಗಿದೆ. ಏಕೆಂದರೆ ಪೈಲ್ಸ್‌ನಲ್ಲಿ ಕರುಳಿನ ಚಲನೆಯ ಸಮಯದಲ್ಲಿ ರಕ್ತಸ್ರಾವವಾಗಬಹುದು. ಮೃದುವಾದ ಕರುಳಿನ ಚಲನೆಯ ಮೂಲಕ ನೋವು, ಅಸ್ವಸ್ಥತೆ ಮತ್ತು ರಕ್ತಸ್ರಾವವನ್ನು ಇದು ಕಡಿಮೆ ಮಾಡುತ್ತದೆ. ದೈನಂದಿನ ಆಹಾರದಲ್ಲಿ ನೀವು ಫೈಬರ್ ಅನ್ನು ಸೇರಿಸಿಕೊಳ್ಳಬೇಕು. ನಾರಿನ ಆಹಾರ, ಧಾನ್ಯಗಳು, ದ್ವಿದಳ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ತೆಗೆದುಕೊಳ್ಳಿ. ಇದಲ್ಲದೆ ಸಾಕಷ್ಟು ನೀರು ಕುಡಿಯಿರಿ.
ಮಸಾಲೆಯುಕ್ತ ಆಹಾರದಿಂದ ದೂರವಿರಿ
ಪೈಲ್ಸ್ ರೋಗಿಗಳಿಗೆ ಮಸಾಲೆಯುಕ್ತ ಆಹಾರವು ದೊಡ್ಡ ಶತ್ರುವಿದ್ದಂತೆ. ಇದು ಜೀರ್ಣಕ್ರಿಯೆಯನ್ನು ಹಾಳುಮಾಡುವುದು ಮಾತ್ರವಲ್ಲದೆ ಕರುಳಿನ ಚಲನೆಯ ರೀತಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ವಿಶೇಷವಾಗಿ ಕೆಂಪು ಮೆಣಸಿನ ಪುಡಿಯಿಂದ ಸಾಧ್ಯವಾದಷ್ಟು ದೂರವಿರಿ. ಏಕೆಂದರೆ ಅದು ನಮ್ಮ ಕರುಳಿಗೆ ಅಂಟಿಕೊಳ್ಳುವುದರಿಂದ ಕಿರಿಕಿರಿಯು ಹೆಚ್ಚಾಗುತ್ತದೆ. ನಿಮ್ಮ ಆಹಾರದಲ್ಲಿ ಮಸಾಲೆಯುಕ್ತ ಮತ್ತು ಎಣ್ಣೆಯಲ್ಲಿ ಹುರಿದ ಆಹಾರವನ್ನು ಕಡಿಮೆ ಮಾಡಿದರೆ ಪೈಲ್ಸ್ ಕೂಡ ನಿಯಂತ್ರಣದಲ್ಲಿರುತ್ತದೆ.
ಅಗತ್ಯ ಎನಿಸಿದಾಗ ತಕ್ಷಣ ಶೌಚಕ್ಕೆ ಹೋಗಿ
ನಾವು ಕೆಲಸಗಳಲ್ಲಿ ನಿರತರಾಗಿರುವಾಗ ಅಥವಾ ಪ್ರಯಾಣ ಮಾಡುವಾಗ ಮೂತ್ರ ಬಂದರೂ ಕಟ್ಟಿಕೊಳ್ಳುತ್ತೇವೆ. ಕರುಳಿನ ಚಲನೆಯನ್ನು ವಿಳಂಬಗೊಳಿಸುತ್ತೇವೆ. ಇದೊಂದು ಕೆಟ್ಟ ಅಭ್ಯಾಸ. ಪ್ರಕೃತಿಯ ಕರೆಯನ್ನು ನಿಲ್ಲಿಸುವುದರಿಂದ ಅನೇಕ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಪೈಲ್ಸ್ ಇದ್ದರೆ ಅವರ ಗುದನಾಳದ ಸ್ನಾಯುಗಳು ಸಡಿಲಗೊಳ್ಳುತ್ತವೆ, ಇದು ಅಸ್ವಸ್ಥತೆಯನ್ನು ಹೆಚ್ಚಿಸುತ್ತದೆ.