ಅನಧಿಕೃತ ಕಟೌಟ್ ಬಿದ್ದು ಪಾದಚಾರಿಗೆ ಗಾಯ: ಶಾಸಕ ರಘು ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು ನೀಡಿದ ಎಎಪಿ

ಬೆಂಗಳೂರು: ಓಲ್ಡ್ ಏರ್‍ ಪೋರ್ಟ್ ರಸ್ತೆಯಲ್ಲಿ ಎಚ್ಎಎಲ್ ವಿಮಾನ ನಿಲ್ದಾಣದ ಬಳಿ ಹಾಕಿದ್ದ ಅನಧಿಕೃತವಾಗಿ ಅಳವಡಿಸಿದ್ದ ಕಟೌಟ್ ಬಿದ್ದು ಪಾದಚಾರಿಗಳು ಗಾಯಗೊಂಡಿದ್ದು, ಬ್ಯಾನರ್, ಕಟೌಟ್ ಹಾಕಿರುವ ಸಿವಿ ರಾಮನ್ ನಗರ ಶಾಸಕ ಎಸ್‌. ರಘು ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷ ಪೊಲೀಸರಿಗೆ ದೂರು ಸಲ್ಲಿಸಿದೆ.

ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಮತ್ತು ಪಕ್ಷದ ಕಾರ್ಯಕರ್ತರು ಜೀವನ್ ಭೀಮಾ ನಗರ ಪೋಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಕಟೌಟ್ ಬಿದ್ದು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವಿನ ಆರೋಗ್ಯವನ್ನು ಕೂಡ ವಿಚಾರಿಸಿದರು.

ದೂರು ನೀಡಿದ ಬಳಿಕ ಮಾತನಾಡಿದ ಮೋಹನ್ ದಾಸರಿ, ಸಿವಿ ರಾಮನ್ ನಗರ ಶಾಸಕ ಎಸ್‌. ರಘು ತಾವೇ ಖುದ್ದಾಗಿ ತಮ್ಮ ಫೇಸ್‌ಬುಕ್ ಅಧಿಕೃತ ಖಾತೆಯಲ್ಲಿ ಈ ಬ್ಯಾನರ್, ಕಟೌಟ್ ಹಾಕಿರುವುದು ನಾನೇ ಎಂದು ಹೇಳಿದ್ದಾರೆ. 22ರಂದು ರಾಮ ಮಂದಿರ ಉದ್ಘಾಟನೆಯಾಗಿದೆ, ಅದಾದ ಬಳಿಕ ಇಷ್ಟು ದಿನವಾದರೂ ಬ್ಯಾನರ್, ಕಟೌಟ್ ತೆರವು ಮಾಡಿಲ್ಲ.

ಬಿಬಿಎಂಪಿ ಇಂಜಿನಿಯರ್ ಗಳು ಏನು ಮಾಡುತ್ತಿದ್ದಾರೆ, ಕಟೌಟ್‌ ಮತ್ತು ಬ್ಯಾನರ್ ಎಲ್ಲೇ ಹಾಕಿದರು ಅದು ಅನಧಿಕೃತ ಎಂದು ಕೋರ್ಟ್ ಆದೇಶ ಕೊಟ್ಟಿದೆ. ಇದು ಬಿಬಿಎಂಪಿ ಅಧಿಕಾರಿಗಳ ಕರ್ತವ್ಯ ಲೋಪ, ಇಷ್ಟು ದಿನವಾದರೂ ಯಾಕೆ ತೆರವುಗೊಳಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಮೆಲ್ ವೃತ್ತ, ಬಿಎಂಶ್ರೀ ವೃತ್ತ, ಬೆನ್ನಿಗಾನಹಳ್ಳಿ, ಎನ್‌ಜಿಎಫ್ ವೃತ್ತ, ಇಂದಿರಾನಗರ, ಹಳೇ ವಿಮಾನ ನಿಲ್ದಾಣ ರಸ್ತೆಯ ವಿಶ್ವೇಶ್ವರ ಶಾಲೆಯ ಬಳಿ ಅನಧಿಕೃತ ಕಟೌಟ್ ನಿಲ್ಲಿಸಲಾಗಿದೆ ಎಂದು ಮೋಹನ್ ದಾಸರಿ ಮಾಹಿತಿ ನೀಡಿದರು.

ಆ ರಸ್ತೆಗಳಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ, ಸಾವಿರಾರು ಪಾದಚಾರಿಗಳು ಓಡಾಡುತ್ತಾರೆ. ಅಂತಹ ಜಾಗದಲ್ಲಿ ಕಳೆದ 11 ದಿನದಿಂದ ಅನಧಿಕೃತವಾಗಿ ಕಟೌಟ್ ಅಳವಡಿಸಿದ್ದಾರೆ. ಮತ್ತೊಂದು ಕಟೌಟ್ ಬಿದ್ದು ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದರು.

ಇಂದು ಆಗಿರುವ ಅನಾಹುತಕ್ಕೆ ಶಾಸಕ ರಘು ಮತ್ತು ಬಿಬಿಎಂಪಿ ಅಧಿಕಾರಿಗಳೇ ನೇರ ಹೊಣೆ, ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮೋಹನ್ ದಾಸರಿ ಆಗ್ರಹಿಸಿದರು.

Loading

Leave a Reply

Your email address will not be published. Required fields are marked *