ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನೆಗೊಂಡಿರುವ ರಾಮಮಂದಿರಕ್ಕೆ ಭವಿಷ್ಯದಲ್ಲಿ ಭೇಟಿ ನೀಡುವುದಾಗಿ ದಕ್ಷಿಣ ಆಫ್ರಿಕಾದಲ್ಲಿರುವ ಭಾರತದ ಸಂಜಾತ ಕೇಶವ್ ಮಹಾರಾಜ್ ತಿಳಿಸಿದ್ದಾರೆ. ಅಲ್ಲದೆ ತಾವು ಬ್ಯಾಟಿಂಗ್ ಮಾಡಲು ಬರುವಾಗ ‘ಆದಿಪುರುಷ್’ ಸಿನಿಮಾದ ‘ರಾಮ್ ಸೀತಾ ರಾಮ್’ ಗೀತೆಯನ್ನು ಪ್ಲೇ ಮಾಡುವ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
ಭಗವಾನ್ ಶ್ರೀರಾಮ ಮತ್ತು ಆಂಜನೇಯನ ಪರಮ ಭಕ್ತನಾಗಿರುವ ಕೇಶವ್ ಮಹಾರಾಜ್, ದಕ್ಷಿಣ ಆಫ್ರಿಕಾ ತಂಡದೊಂದಿಗೆ ಭಾರತದ ಪ್ರವಾಸ ಕೈಗೊಂಡಾಗ ಹಲವಾರು ದೇವಾಲಯಗಳಿಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ. ಅಲ್ಲದೆ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ಭಾರತೀಯರಿಗೆ ತಮ್ಮ ಎಕ್ಸ್ ಖಾತೆ ಮೂಲಕ ವಿಶೇಷ ಸಂದೇಶ ಕೋರಿದ್ದರು
“ನಾನು ಈಗ ಬಿಡುವಿಲ್ಲದ ಕ್ರಿಕೆಟ್ ಆಡುತ್ತಿರುವುದರಿಂದ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ. ಆದರೆ ಭವಿಷ್ಯದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಲು ತುಂಬಾ ಸಂತೋಷಪಡುತ್ತೇನೆ” ಎಂದು ದಕ್ಷಿಣ ಆಫ್ರಿಕಾದ ಖ್ಯಾತ ಸ್ಪಿನ್ನರ್ ಹೇಳಿದ್ದಾರೆ.
ಖಂಡಿತವಾಗಿಯೂ ಭವಿಷ್ಯದಲ್ಲಿ ಆ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತೇನೆ. ಲಖನೌ ಸೂಪರ್ ಜಯಂಟ್ಸ್ ತಂಡದ ಫ್ರಾಂಚೈಸಿ ನನಗೆ ನೆರವಾಗುವ ಭರವಸೆ ಇದೆ. ನಮ್ಮ ಕುಟುಂಬದವರು ಯಾವಾಗಲೂ ಭಾರತದ ತೀರ್ಥಯಾತ್ರೆ ಮಾಡಲು ತುಂಬಾ ಬಯಸುತ್ತಾರೆ. ಬಹುಶಃ ಅಯೋಧ್ಯೆಗೆ ಕುಟುಂಬದೊಂದಿಗೆ ಭೇಟಿ ನೀಡುವುದು ಒಂದು ಸುಂದರ ಪಯಣವಾಗಿರುತ್ತದೆ ಎಂಬುದು ನನ್ನ ಭಾವನೆ,” ಎಂದು ಡರ್ಬನ್ ಸೂಪರ್ ಜಯಂಟ್ಸ್ ತಂಡದ ನಾಯಕ ತಿಳಿಸಿದ್ದಾರೆ.