ಬಾಗಲಕೋಟೆ : ಸಿಎಎ ಜಾರಿ ಆಗಲೇಬೇಕು, ಆಗ ವಿರೋಧ ಉಂಟಾಗಿ ಆಗಿರಲಿಲ್ಲ. ಈಗ ಕೇಂದ್ರ ಸರ್ಕಾರ ಮಾಡೇ ಮಾಡುತ್ತದೆ. ಈಗ ಆಗದಿದ್ದರೂ ಮುಂದಿನ ಚುನಾವಣೆಗಾದರೂ ಜಾರಿ ಮಾಡೇ ಮಾಡುತ್ತಾರೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ಜೊತೆಗೆ ಸಮಾನ ನಾಗರಿಕ ಸಂಹಿತೆ, ಜನಸಂಖ್ಯೆ ನಿಯಂತ್ರಣ ಕಾನೂನು ಕೂಡ ಜಾರಿಯಾಗಿ,
ಹಿಂದು ರಾಷ್ಟ್ರ ಘೋಷಣೆ ಕೂಡ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 2024ರ ಚುನಾವಣೆಯಲ್ಲಿ ಮೋದಿ ಅವರು ನೂರಕ್ಕೆ ನೂರು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತಾರೆ. ನಮ್ಮ ಉಳಿವಿಗಾಗಿ ಮೋದಿ ಅವಶ್ಯಕತೆ ಇದೆ ಅನ್ನೋದು ತಳಮಟ್ಟದ ಸಾಮಾನ್ಯ ನಾಗರಿಕರಿಗೂ ಗೊತ್ತಾಗಿದೆ ಎಂದು ಅಭಿಪ್ರಾಯಪಟ್ಟರು. ಮಾಜಿ ಸಿಎಂ ಶೆಟ್ಟರ್ ಘರ್ ವಾಪ್ಸಿ ಕುರಿತು ಪ್ರತಿಕ್ರಿಯಿಸಿದ ಮುತಾಲಿಕ್, ಜಗದೀಶ ಶೆಟ್ಟರ್ ಅವರದು ರಾಜಕೀಯ. ನಾನೇನು ಅದರ ಬಗ್ಗೆ ಕಮೆಂಟ್ ಮಾಡಲ್ಲ ಎಂದರು. ಮುತಾಲಿಕ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಕೇಳಲಾದ ಪ್ರಶ್ನೆಗೆ ನಾನು ರಾಜಕೀಯದ ಬಾಗಿಲು ಮುಚ್ಚಿದ್ದೇನೆ.
ಸ್ಪರ್ಧೆ ಮಾಡಲ್ಲ. ಆದರೆ, ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನ ಆರಂಭ ಮಾಡಿದ್ದೇವೆ. ಈಗಾಗಲೆ ಅಭಿಯಾನಕ್ಕೆ ಚಿಕ್ಕೋಡಿಯಲ್ಲಿ ಚಾಲನೆ ನೀಡಲಾಗಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಈಶ್ವರಪ್ಪನವರು ಬಂದಿದ್ದರು. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆಸಲು ಯೋಜನೆ ಮಾಡಿದ್ದೇವೆ. ನಾವು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ. ದೇಶಕ್ಕೆ ಮೋದಿ ಬೇಕು ಅನ್ನೋದು ನಮ್ಮ ಆಶಯವಾಗಿದೆ ಎಂದರು.