ಮಂಡ್ಯ: ಕುಮಾರಸ್ವಾಮಿ ಸಿಎಂ ಆಗುವುದಕ್ಕೆ ಮಂಡ್ಯ ಜನರ ಆಶೀರ್ವಾದ ಕಾರಣ ಎಂಬುದನ್ನು ಮರೆಯಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಮಂಡ್ಯ ತಾಲೂಕಿನ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀವು ಸಿಎಂ ಆಗುವುದಕ್ಕೆ ಮಂಡ್ಯ ಜನರ ಆಶೀರ್ವಾದ ಕಾರಣ ಎಂಬುದನ್ನು ಮರೆಯಬೇಡಿ. ಜಿಲ್ಲೆಯ ಜನರ ಜೀವನ ಹಾಳುಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜವಾಬ್ದಾರಿಯುತ ಪ್ರತಿಪಕ್ಷದ ನಾಯಕರಾಗಿ ನೀವು ನಮ್ಮನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳಬೇಕೇ ವಿನಃ ಶಾಂತಿ ಕದಡುವ ಕೆಲಸ ಮಾಡಬಾರದು. ಜಿಲ್ಲೆಯ ಜನರೇ ನಿಮಗೆ ಅಧಿಕಾರ ನೀಡಿದ್ದು. ಕಳೆದ ಬಾರಿಯ ಚುನಾವಣೆಯಲ್ಲಿ ನಮ್ಮನ್ನು ಆಶೀರ್ವದಿಸಿದ್ದಾರೆ. ಮುಂದೆ ನಾವು ಸರಿಯಾದ ದಾರಿಯಲ್ಲಿ ಸಾಗದಿದ್ದರೆ ನಮಗೂ ಜನ ಪಾಠ ಕಲಿಸಬಹುದು. ಇದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿ. ಅದು ಬಿಟ್ಟು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳಿಗೆ ಪ್ರಚೋದನೆ ನೀಡಬೇಡಿ ಎಂದು ಕುಮಾರಸ್ವಾಮಿ ಅವರನ್ನುದ್ದೇಶಿಸಿ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.