ವಿಜಯಪುರ: ವಿಜಯಪುರ ಜಿಲ್ಲೆಯ 2 ಕಡೆ ಮತ್ತೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.9 ರಷ್ಟು ತೀವ್ರತೆ ದಾಖಲಾಗಿದೆ. ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಿನ್ನೆ ತಡರಾತ್ರಿ 12.22 ನಿಮಿಷಕ್ಕೆ ಹಾಗೂ ರಾತ್ರಿ 1.20 ನಿಮಿಷಕ್ಕೆ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದ ತೀರ್ವತೆಯನ್ನು ರಿಕ್ಟರ್ ಮಾಪಕದಲ್ಲಿ 2.9 ಎಂದು ಅಳೆಯಲಾಗಿದೆ. ಭೂಮಿಯ 5 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ.
ಭೂಕಂಪನದಿಂದ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಮನೆಯಲ್ಲಿನ ಸಾಮಾಗ್ರಿಗಳು ಚಲ್ಲಾಪಿಲ್ಲಿಯಾಗಿವೆ. ಪದೇ ಪದೆ ಭೂಕಂಪನದಿಂದ ಜನತೆ ಆತಂಕಗೊಂಡಿದ್ದಾರೆ. ವಿಜಯಪುರದಲ್ಲಿ ಪದೇಪದೆ ಭೂಕಂಪನ ಅನುಭವವಾಗುತ್ತಿದ್ದು, ಕಳೆದ ವರ್ಷವಂತೂ ಸುಮಾರು ಹತ್ತಕ್ಕೂ ಹೆಚ್ಚು ಸಲ ಈ ಪ್ರದೇಶದಲ್ಲಿ ಕಂಪನಗಳು ಸಂಭವಿಸಿದ್ದವು. ಇದೀಗ ಹೊಸ ವರ್ಷದಲ್ಲಿ ಮೊದಲ ಭೂಕಂಪನದ ಅನುಭವವಾಗಿದೆ ಎನ್ನುತ್ತಾರೆ ಸ್ಥಳೀಯರು.