ನವದೆಹಲಿ: ಅಪಾರ ಸಂಖ್ಯೆಯಲ್ಲಿ ಭಕ್ತರು ಆಯೋಧ್ಯೆಗೆ ಆಗಮಿಸುತ್ತಿರುವ ಕಾರಣ ಮಾರ್ಚ್ ವರೆಗೆ ಸಚಿವ ಸಂಪುಟದ ಸದಸ್ಯರು ಆಯೋಧ್ಯೆಗೆ ಭೇಟಿ ನೀಡದಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ. ಸಚಿವರ ಭೇಟಿಯಿಂದ ಭಕ್ತರಿಗೆ ಅನಾನುಕೂಲಗಳಾಗಲಿವೆ. ಹೀಗಾಗಿ ಮಾರ್ಚ್ ತಿಂಗಳ ಬಳಿಕ ಭೇಟಿ ನೀಡಿ ದರ್ಶನ ಪಡೆಯಲು ಮೋದಿ ಸೂಚಿಸಿದ್ದಾರೆ. ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ.
ಈ ವೇಳೆ ಪ್ರಧಾನಿ ಮೋದಿ ಸಚಿವ ಸಂಪುಟ ಸದಸ್ಯರಿಗೆ ಈ ಸೂಚನೆ ನೀಡಿದ್ದಾರೆ. ಆಯೋಧ್ಯೆಯಲ್ಲಿ ಸದ್ಯ ವಿಪರೀತ ಜನದಟ್ಟಣೆ ಇದೆ. ಇದೇ ಸಂದರ್ಭದಲ್ಲಿ ಸಚಿವರು ಆಯೋಧ್ಯೆಗೆ ಭೇಟಿ ನೀಡಿದರೆ ಗಣ್ಯರ ಪ್ರೊಟೋಕಾಲ್ ಅಡಿಯಲ್ಲಿ ಭೇಟಿಗೆ ಅವಕಾಶ ನೀಡಲಾಗುತ್ತದೆ. ಇದರಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿರುವ ಭಕ್ತರಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಮಾರ್ಚ್ ವರೆಗೆ ಸಚಿವರು ಆಯೋಧ್ಯೆ ಭೇಟಿ ಮಾಡದಂತೆ ಮೋದಿ ಸೂಚಿಸಿದ್ದಾರೆ.