ಅಯೋಧ್ಯೆ: ಇಲ್ಲಿನ ಬೀದಿಗಳಲ್ಲಿ ಇನ್ಮುಂದೆ ಬಂದೂಕು ಸದ್ದು ಮಾಡುವುದಿಲ್ಲ, ಕರ್ಫ್ಯೂ ಇರುವುದಿಲ್ಲ. ಇಲ್ಲಿ ಯಾವಾಗಲೂ ದೀಪೋತ್ಸವ ಮತ್ತು ರಾಮೋತ್ಸವ ನಡೆಯುತ್ತದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಎಲ್ಲಿ ನಾವು ಮಂದಿರ ನಿರ್ಮಿಸಲು ಪಣ ತೊಟ್ಟಿದ್ದೆವೋ, ಅಲ್ಲಿಯೇ ಅದನ್ನು ನಿರ್ಮಿಸಲಾಗಿದೆ. ಇಲ್ಲಿ ಬಾಲರಾಮ ಪ್ರತಿಷ್ಠಾಪನೆಯು ರಾಮ ರಾಜ್ಯದ ಗುರುತಾಗಿದ್ದು, ಶ್ರೀರಾಮನ ನಾಮಸ್ಮರಣೆಯೇ ಸದಾ ಇಲ್ಲಿ ಮೊಳಗಲಿದೆ ಎಂದು ಅವರು ಹೇಳಿದ್ದಾರೆ.
500 ವರ್ಷಗಳ ಸುದೀರ್ಘವಾಗಿ ಕಾದು ಇಂದು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯಾಗಿದೆ. ಇದೊಂದು ದೇಶದ ಭಾವನಾತ್ಮಕ ಘಳಿಗೆಯಾಗಿದೆ. ಈ ಬಗ್ಗೆ ನನಗೆ ಮಾತಾಡಲು ಪದಗಳೇ ಸಿಗುತ್ತಿಲ್ಲ. ಪ್ರತಿಯೊಬ್ಬರೂ ಭಾವುಕರಾಗಿದ್ದು, ಎಲ್ಲರೂ ಸಂತುಷ್ಟರಾಗಿದ್ದಾರೆ. ಈ ದಿನ ದೇಶದ ಪ್ರತಿ ನಗರ ಮತ್ತು ಹಳ್ಳಿಯೂ ಅಯೋಧ್ಯೆಯಾಗಿ ಬದಲಾಗಿದೆ ಎಂದಿದ್ದಾರೆ. ಇದೇ ವೇಳೆ ಅವರು ಬಾಬ್ರಿ ಮಸೀದಿ ಇದ್ದ ವಿವಾದಿತ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಲು ಈ ಹಿಂದೆ ನಡೆದ ಹೋರಾಟಗಳಲ್ಲಿ ಬಳಕೆಯಾದ ಮಂದಿರ್ ವಹಿ ಬನಾಯೇಂಗೆ ಘೋಷಣೆಯನ್ನು ಸ್ಮರಿಸಿಕೊಂಡಿದ್ದಾರೆ.