ಹಣಕ್ಕಾಗಿ ಅಜ್ಜಿಯನ್ನೇ ಕೊಂದ 15 ವರ್ಷದ ಬಾಲಕ..!

 ನವದೆಹಲಿ: 15 ವರ್ಷದ ಬಾಲಕನೊಬ್ಬ ಹಣಕ್ಕಾಗಿ ಸ್ನೇಹಿತನೊಂದಿಗೆ ಸೇರಿ ತನ್ನ 77 ವರ್ಷದ ಅಜ್ಜಿಯನ್ನು ಕೊಲೆಗೈದ ಘಟನೆ ದೆಹಲಿಯಲ್ಲಿ (Delhi) ನಡೆದಿದೆ. ಬಾಲಕ ತನ್ನ ಅಜ್ಜಿ ಒಬ್ಬಳೇ ಮನೆಯಲ್ಲಿದ್ದಾಗ ಆಕೆಯ ಮನೆಗೆ ಸ್ನೇಹಿತನೊಂದಿಗೆ ಬಂದಿದ್ದ. ಬಳಿಕ ಮಲಗಿದ್ದ ವೃದ್ಧೆಯ ಮುಖಕ್ಕೆ ತಲೆದಿಂಬಿನಿಂದ ಒತ್ತಿ ಉಸಿರು ಕಟ್ಟಿಸಿ ಬಳಿಕ ತಲೆಯ ಮೇಲೆ ಇಬ್ಬರೂ ಸೇರಿ ಹಲ್ಲೆ ನಡೆಸಿದ್ದರು ಎಂದು ತಿಳಿದು ಬಂದಿದೆ. ಬಳಿಕ ಲಾಕರ್ ಒಪನ್ ಮಾಡಿ ಅದರಲ್ಲಿದ್ದ ಹಣ ಕದ್ದು ಅಲ್ಲಿಂದ ಪರಾರಿಯಾಗಿದ್ದರು.

ಇತ್ತ ಮನೆಗೆ ಬಂದಿದ್ದ ಬಾಲಕನ ಅಜ್ಜ, ವೃದ್ಧೆಯ ಸಾವು ಸಹಜ ಎಂದು ಭಾವಿಸಿದ್ದರು. ಅಂತ್ಯಸಂಸ್ಕಾರಕ್ಕೆ ಸಿದ್ಧತೆ ವೇಳೆ ಸಂಬಂಧಿಕರು ಹಣೆಯ ಬಳಿ ಗಾಯವಾಗಿರುವುದನ್ನು ಗಮನಿಸಿದ್ದರು. ಇದನ್ನು ತೋರಿಸಿದ ಬಳಿಕ ವೃದ್ಧ ಲಾಕರ್ ಪರಿಶೀಲಿಸಿದ್ದು, ಅದರಲ್ಲಿದ್ದ ಹಣ ಕಳವಾಗಿರುವುದು ಬೇಳಕಿಗೆ ಬಂದಿದೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು.

ತನಿಖೆ ವೇಳೆ ವೃದ್ಧ ದಂಪತಿಯ 15 ವರ್ಷದ ಮೊಮ್ಮಗ ಬಂದಿರುವುದು ತಿಳಿದು ಬಂದಿದೆ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಅಜ್ಜಿಯನ್ನು ಕೊಲೆಗೈದು ಹಣ ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ ಆತನ ಸ್ನೇಹಿತನನ್ನು ಬಂಧಿಸಲಾಗಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇಬ್ಬರೂ ಸೇರಿ ವೃದ್ಧೆಯ ಸಾವು ಸಹಜ ಎನ್ನುವ ರೀತಿಯಲ್ಲಿ ಸಂಚು ರೂಪಿಸಿದ್ದರು. ಬಂಧಿತರಿಂದ 14,000 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Loading

Leave a Reply

Your email address will not be published. Required fields are marked *