ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿಗೆ ನೀಡಲಾಗಿದ್ದ ಒಳಮೀಸಲಾತಿಯ (SC Internal Reservation) ಬಗ್ಗೆ ಪುನರ್ ಪರಿಶೀಲನೆ ಮಾಡ್ತೇವೆ ಎಂದು ಗೃಹಸಚಿವ ಜಿ.ಪರಮೇಶ್ವರ್ (G. Parameshwara) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಪರಿಶಿಷ್ಟ ಜಾತಿಗೆ ನೀಡಿದ್ದ ಒಳಮೀಸಲಾತಿಯ ಬಗ್ಗೆ ಪುನರ್ ಪರಿಶೀಲನೆ ಮಾಡ್ತೇವೆ. ಏಕೆಂದರೆ ಬಿಜೆಪಿ ಸರ್ಕಾರ (BJP Government) ಕಾನೂನಾತ್ಮಕವಾಗಿ ಒಳಮೀಸಲಾತಿ ಕೊಟ್ಟಿಲ್ಲ ಎಂದು ಟೀಕಿಸಿದ್ದಾರೆ.
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಬಗ್ಗೆ ಒಂದು ಅಂತಿಮ ನಿರ್ಣಯ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ನಮ್ಮ ಹಿಂದಿನ ಸರ್ಕಾರದಲ್ಲಿ ಚಿತ್ರದುರ್ಗ ಸಮಾವೇಶದಲ್ಲಿ ಸದಾಶಿವ ಆಯೋಗದ ನಿರ್ಣಯ ಕೈಗೊಳ್ಳಲು ತೀರ್ಮಾನ ಮಾಡಿದ್ದೆವು. ಆದ್ರೆ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸದಾಶಿವ ಆಯೋಗದ ವರದಿಯನ್ನೇ ತಿರಸ್ಕಾರ ಮಾಡಿದರು. ಒಳಮೀಸಲಾತಿ ಕೊಡುವಾಗ ಕಾನೂನಾತ್ಮಕವಾಗಿ ಕೊಡಬೇಕಾಗುತ್ತದೆ. ನಾವೇ ಸಂವಿಧಾನಕ್ಕೆ ತಿದ್ದುಪಡಿ ತರಲು ಆಗಲ್ಲ. ಹಾಗಾಗಿ ಕೇಂದ್ರಕ್ಕೆ ಸಂವಿಧಾನ ತಿದ್ದುಪಡಿ ಮಾಡಲು ಶಿಫಾರಸು ಕಳಿಸುವ ಬಗ್ಗೆ ಇವತ್ತಿನ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದ್ದಾರೆ.