ಬೆಂಗಳೂರು,ಜ.18- ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಪಡೆದರೂ ಸಹ ಅಭ್ಯರ್ಥಿಗಳಿಗೆ ತರಬೇತಿ ನೀಡದ 8 ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜೀವನೋಪಾಯ ಹಾಗೂ ಕೌಶಲ್ಯಭಿವೃದ್ದಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬುಧವಾರ ಸಂಜೆ ವಿಕಾಸಸೌಧದಲ್ಲಿ ರಾಷ್ಟ್ರೀಯ ಜೀವನೋಪಾಯ ಮಿಷನ್ನ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ, ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು, ಸರ್ಕಾರದ ಮಹತ್ವದ ಯೋಜನೆಯನ್ನು ಅನುಷ್ಠಾನ ಮಾಡದಿರುವ ಕಂಪನಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಡಿಪ್ಲೊಮಾ, ಐಐಟಿ ಸೇರಿದಂತೆ ಮತ್ತಿತರ ವೃತ್ತಿಪರ ಕೋರ್ಸ್ಗಳಿಗೆ ತರಬೇತಿ ನೀಡಲು ಒಪ್ಪಂದ ಮಾಡಿಕೊಂಡು ನಿಯಮ ಉಲ್ಲಂಘನೆ ಮಾಡಿರುವ 8 ಕಂಪನಿಗಳ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಬೇಕು. ಜೊತೆಗೆ ತಕ್ಷಣದಿಂದಲೇ ಅನ್ವಯವಾಗುವಂತೆ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಿ, ಮುಂದೆ ಇಂತಹ ಏಜೆನ್ಸಿಗಳಿಗೆ ತರಬೇತಿ ನೀಡುವ ಟೆಂಡರ್ಗಳನ್ನು ನೀಡಬಾರದು ಎಂದು ತಾಕೀತು ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಈ ಯೋಜನೆಯಡಿ ಗ್ರಾಮೀಣ ಮತ್ತು ನಗರ ಭಾಗದಲ್ಲಿರುವ ವೃತ್ತಿಪರ ಕೋರ್ಸ್ಗಳಿಗೆ ತರಬೇತಿ ನೀಡಲು ಒಟ್ಟು 74.65 ಕೋಟಿ ರೂ. ಪಡೆದುಕೊಂಡಿದ್ದಾರೆ. ನಿಯಮಗಳನ್ನು ಪಾಲನೆ ಮಾಡದಿರುವವರಿಂದ ಬಡ್ಡಿ ಸಮೇತವಾಗಿ ವಸೂಲಿ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದರು.