ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರ ಈ ಭೇಟಿಯ ಹಿನ್ನೆಲೆಯಲ್ಲಿ, ಅದೇ ದಿನ ನಿಗದಿಯಾಗಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಬಿಜೆಪಿ ನಾಯಕರು ಮುಂದೂಡಿದ್ದಾರೆ. ಪ್ರಧಾನಿ ಮೋದಿ ಅವರ ರೋಡ್ ಶೋ ನಡೆಸುವುದಕ್ಕೆ ಮನವಿ ಮಾಡಿ, ಮಾರ್ಗದ ನೀಲ ನಕ್ಷೆಯನ್ನು ಪ್ರಧಾನ ಮಂತ್ರಿ ಕಚೇರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ಅವರು ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಜಾಗತಿಕ ಏರೋಸ್ಪೇಸ್ ಪ್ರಮುಖ ಬೋಯಿಂಗ್ನ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ. ಮೋದಿ ಅವರು ಉದ್ಘಾಟಿಸಲಿರುವ ಹೊಸ ಕ್ಯಾಂಪಸ್ ಹೈಟೆಕ್ ಏರೋಸ್ಪೇಸ್ ಪಾರ್ಕ್ ಆಗಿದ್ದು, ಅಮೆರಿಕ ಬಿಟ್ಟು ಹೊರಗೆ ಆ ರೀತಿ ಅತ್ಯಾಧುನಿಕ ಸೌಕರ್ಯ ಹೊಂದಿದ ಅತಿ ದೊಡ್ಡ ಬೋಯಿಂಗ್ ಸೌಲಭ್ಯ ಎಂದು ಮೂಲಗಳು ಹೇಳಿವೆ.