ಸಿದ್ದರಾಮಯ್ಯರ ಮುಂದೆ ಅನಂತ್ ಕುಮಾರ್ ಹೆಗಡೆ ಹುಲ್ಲು ಕಡ್ಡಿಗೂ ಸಮವಿಲ್ಲ – ದಿನೇಶ್ ಗುಂಡೂರಾವ್

ಬೆಂಗಳೂರು:– ಸಿದ್ದರಾಮಯ್ಯರ ಮುಂದೆ ಅನಂತ್ ಕುಮಾರ್ ಹೆಗಡೆ ಹುಲ್ಲು ಕಡ್ಡಿಗೂ ಸಮಾನರಲ್ಲ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ಶೋಷಿತ ಸಮುದಾಯದ ದ್ವನಿಯಾಗಿರುವ ಸಿದ್ದರಾಮಯ್ಯರನ್ನು ಮತಾಂಧತೆಯ ವಿಷ ತುಂಬಿಕೊಂಡಿರುವ ಹೆಗಡೆ ಏಕವಚನದಲ್ಲಿ ‘ಮಗನೇ’ ಎಂದಿರುವುದು ಅವರ ಕೊಳಕು ಮನಸ್ಥಿತಿಯ ಅನಾವರಣ ಮಾಡಿದೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯರಿಗೆ ‘ಮಗನೇ’ ಎಂದು ಸಂಬೋಧಿಸಿರುವ ಅನಂತ್ ಕುಮಾರ್ ಹೆಗಡೆ ಹಿಂದೂ ಸಮಾಜದ ಕಳಂಕವಿದ್ದಂತೆ. ವಯಸ್ಸಿನಲ್ಲಿ ಹಿರಿಯರಾದವರಿಗೆ ಮರ್ಯಾದೆ ಕೊಡುವುದು ನಮ್ಮ ಹಿಂದೂ ಧರ್ಮ ಕಲಿಸಿರುವ ಸಂಸ್ಕಾರ. ಅನಂತ್ ಕುಮಾರ್ ಹೆಗಡೆಯವರು ಯಾವ ಧರ್ಮದಿಂದ ಈ ರೀತಿ ಕೊಳಕು ಭಾಷೆ ಮಾತನಾಡುವ ಸಂಸ್ಕಾರ ಕಲಿತಿದ್ದಾರೆ ಎಂದು ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.

ಬಾಯಿ ಬಿಟ್ಟರೆ ಹೊಡಿ, ಬಡಿ, ಕೊಚ್ಚು, ಕೊಲ್ಲು, ದ್ವೇಷ, ಸೇಡು ಎನ್ನುವ ಅನಂತ್ ಕುಮಾರ್ ಹೆಗಡೆಯಂತಹವರು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಟ್ಟ ಹುಳು ಇದ್ದಂತೆ. ಅನಂತ್ ಕುಮಾರ್ ಹೆಗಡೆಯವರೇ, ಸಾರ್ವಜನಿಕವಾಗಿ ಹೇಗೆ ಮಾತಾಡಬೇಕು ಹಾಗೂ ಹೇಗೆ ವರ್ತಿಸಬೇಕು ಎಂಬ ಕನಿಷ್ಟ ಜ್ಞಾನವನ್ನು ದಯವಿಟ್ಟು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ನಿಮ್ಮಂತೆ ಹಿಂದುತ್ವದ ಅಮಲು ತುಂಬಿಕೊಂಡಿರುವ ಕೆಲವರಿಗೆ ಮಾತ್ರ ನಿಮ್ಮ ಅಸಹ್ಯದ ಮಾತುಗಳು ರುಚಿಸಬಹುದೇನೋ? ಆದರೆ ಪ್ರಜ್ಞಾವಂತ ಹಿಂದೂಗಳು ಯಾವತ್ತಿಗೂ ನಿಮ್ಮ ಮಾತು ಒಪ್ಪಲಾರರು ಎಂದು ವಾಗ್ದಾಳಿ ನಡೆಸಿದ್ದಾರೆ.

Loading

Leave a Reply

Your email address will not be published. Required fields are marked *