ಫೈಟರ್‌ಜೆಟ್‌ಗಳಿಗೆ ಶೀಘ್ರದಲ್ಲೇ ಡಿಜಿಟಲ್‌ ನಕ್ಷೆ ಅಳವಡಿಸಲು ಪ್ಲಾನ್!

ಬೆಂಗಳೂರು: ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಪೈಲಟ್‌ಗಳಿಗೆ ದಿಕ್ಕು ತಪ್ಪಿಸುವುದನ್ನು ತಡೆಯಲು ಫೈಟರ್‌ಜೆಟ್‌ಗಳಿಗೆ ಶೀಘ್ರದಲ್ಲೇ ಡಿಜಿಟಲ್‌ ನಕ್ಷೆ (India Made Digital Maps) ಗಳನ್ನು ಅಳವಡಿಸಲು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (HAL) ಸಜ್ಜಾಗಿರುವುದಾಗಿ ಹೆಚ್‌ಎಎಲ್‌ನ ಉನ್ನತ ಅಧಿಕಾರಿ ತಿಳಿಸಿದ್ದಾರೆ.

ಡಿಜಿಟಲ್‌ ನಕ್ಷೆ (Digital Maps) ಹೊಂದುವುದರಿಂದ ಪೈಲಟ್‌ಗಳು ಅಚಾನಕ್ಕಾಗಿ ಗಡಿ ದಾಟುವುದಿಲ್ಲ. ಗ್ರೂಪ್‌ ಕ್ಯಾಪ್ಟನ್‌ ಅಭಿನಂದನ್‌ ಅವರ ರೀತಿ ಮತ್ತೊಂದು ಘಟನೆ ಸಂಭವಿಸಬಾರದು. ಅದಕ್ಕಾಗಿ ಈ ಡಿಜಿಟಲ್‌ ನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಇನ್ಮುಂದೆ ಅವರು ತಮ್ಮ ಕೈಯಲ್ಲಿ ಮ್ಯಾಪ್‌ ಹಿಡಿದಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ ಎಂದು ಹೆಚ್‌ಎಎಲ್‌ನ ಎಂಜಿನಿಯರಿಂಗ್‌ ಮತ್ತು ಆರ್‌&ಡಿ ವಿಭಾಗದ ನಿರ್ದೇಶಕ ಡಿ.ಕೆ ಸುನೀಲ್‌ ಹೇಳಿದ್ದಾರೆ.

ಡಿಜಿಟಲ್‌ ನಕ್ಷೆಯಿಂದ ಏನು ಅನುಕೂಲ?
ಡಿಜಿಟಲ್‌ ನಕ್ಷೆಯಿಂದ ವಿಮಾನ ಹಾರಾಟ ಸಂದರ್ಭದಲ್ಲಿ ಪೈಲಟ್‌ಗಳು ಕಾಕ್‌ಪಿಟ್ ಡಿಸ್‌ಪ್ಲೇನಲ್ಲಿ (Cockpit Display) ನಕ್ಷೆಯನ್ನು ಪರಿಶೀಲಿಸಬಹುದು. 2ಡಿ ಮತ್ತು 3ಡಿ ರೂಪದಲ್ಲಿ ನಕ್ಷೆ ಲಭ್ಯವಿರಲಿದ್ದು, ಪೈಲಟ್‌ಗಳು ಗುಡ್ಡಗಾಡು ಪ್ರದೇಶದಲ್ಲಿದ್ದರೆ ಮೊದಲೇ ಎಚ್ಚರಿಸುತ್ತದೆ. ಹಾಗಾಗಿ ಎತ್ತರದ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಉಂಟಾಗುವ ಅಪಘಾತಗಳನ್ನು ತಡೆಯಲು ನೆರವಾಗುತ್ತದೆ. ಶತ್ರು ಸೇನಾ ನೆಲೆಗಳ ಬಗ್ಗೆಯೂ ಈ ನಕ್ಷೆ ಮಾಹಿತಿ ನೀಡುತ್ತದೆ ಎಂದು ಡಿ.ಕೆ ಸುನೀಲ್‌ ತಿಳಿಸಿದ್ದಾರೆ.

ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಹೆಚ್ಚಿಸಲು ಡಿಜಿಟಲ್ ನಕ್ಷೆಗಳನ್ನು ಭಾರತದಲ್ಲಿ ವಿನ್ಯಾಸಗೊಳಿಸಿ ಉತ್ಪಾದಿಸಲಾಗುತ್ತದೆ. ಎಲ್ಲಾ ಫೈಟರ್‌ ಜೆಟ್‌ಗಳಲ್ಲೂ ಡಿಜಿಟಲ್‌ ನಕ್ಷೆಯನ್ನು ಅಳವಡಿಸಲಾಗುತ್ತದೆ. ಅದಕ್ಕೆ ಬೇಕಾದ ಎಲ್ಲಾ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳನ್ನೂ ದೇಶದಲ್ಲೇ ತಯಾರಿಸಲಾಗಿದೆ. ಈ ಮೊದಲು, ಈ ನಕ್ಷೆಗಳನ್ನು ವಿದೇಶದಲ್ಲಿ ಮಾತ್ರ ತಯಾರಿಸಲಾಗುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

Loading

Leave a Reply

Your email address will not be published. Required fields are marked *