ಏಳು ತಿಂಗಳ ಮಗು ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಗು ಕಳುವು ಬಗ್ಗೆ ತನಿಖೆಗೆ ಇಳಿದ ಪೊಲೀಸರಿಗೆ ಶಾಕ್

ಮಂಡ್ಯ: 7 ತಿಂಗಳ ಮಗು ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸುಳ್ಳು ಕೇಸ್ ನೀಡಿ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿದ್ದಾಳೆ ಈ ಮಹಿಳೆ. ಹೌದು ಕೆ ಎಸ್ ಆರ್ ಟಿಸಿ ಬಸ್ ನಲ್ಲಿ ವಡ್ಡರಕೊಪ್ಪಲು ಗ್ರಾಮದ ನಿವಾಸಿ ಸವಿತಾ ಎಂಬಾಕೆ ಮಂಡ್ಯ ಜಿಲ್ಲೆಯ ಮಳವಳ್ಳಿ KSRTC ಬಸ್ ನಿಲ್ದಾಣದಲ್ಲಿ ತನ್ನ ಏಳು ತಿಂಗಳ ಮಗು ನಾಪತ್ತೆಯಾಗಿದೆ ಎಂದು ದೂರು ನೀಡಿದ್ದಳು. ಆದರೀಗ ಆ ದೂರುದಾರೆ ಪೊಲೀಸರಿಗೆ ಯಾಮಾರಿಸಿದ್ದಾಳೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಸವಿತಾ ಚನ್ನಪಟ್ಟಣದಿಂದ ಮಳವಳ್ಳಿಗೆ ಬರುವಾಗ ಮಗು ಕಳುವಾಗಿದೆ ಎಂದು ದೂರು ನೀಡಿದ್ದಳು. ತುಂಬಿದ್ದ ಕೆಎಸ್ಆರ್​​ಟಿಸಿ ಬಸ್ ನಲ್ಲಿ ಬರುವಾಗ ಸೀಟ್ ಸಿಗದೆ  ಕುಳಿತಿದ್ದ ಅಪರಿಚಿತ ಮಹಿಳೆಯ ಕೈಗೆ ಮಗು ಕೊಟ್ಟಿದ್ದೆ. ತಾನು ಇಳಿಯುವ ಮುನ್ನ ಅಪರಿಚಿತೆ ಮಗು ಎತ್ತಿಕೊಂಡು ಹೋಗಿದ್ದಾಳೆ ಎಂದು ಸವಿತಾ ದೂರು ನೀಡಿದ್ದಳು.

ಈ ಪ್ರಕರಣದ ಬಗ್ಗೆ ಮಳವಳ್ಳಿ ಟೌನ್ ಪೊಲೀಸರು ಗಂಭೀರವಾಗಿ ತನಿಖೆ ಶುರು ಮಾಡಿದ್ದರು. ಆದರೆ ತನಿಖೆ ವೇಳೆ ಮಹಿಳೆ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಲು ಮುಂದಾಗಿರೋದು ಗೊತ್ತಾಗಿದೆ. ಸವಿತಾ ಬೇರೊಬ್ಬರ ಮಗುವಿನ ಫೋಟೋ ಕೊಟ್ಟು ದೂರು ನೀಡಿದ್ದಾಳೆಂದು ತಿಳಿದುಬಂದಿದೆ. ಅಸಲಿಗೆ ಸವಿತಾಳಿಗೆ ಮಕ್ಕಳೇ ಆಗಿಲ್ಲ. ಆದರೂ ಪರಿಚಯಸ್ಥರ ಮಗುವಿನ ಪೋಟೋವನ್ನೇ ಕೊಟ್ಟು ದೂರು ನೀಡಿದ್ದಳು. ಈ ಬಗ್ಗೆ ಮಳವಳ್ಳಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಇದನ್ನು ಕಂಡು ಮಗುವಿನ ನಿಜವಾದ ತಂದೆ ತನ್ನ ಮಗುವಿನ ಪೋಟೋ ಹಂಚಿಕೊಂಡ ಪೊಲೀಸರಿಗೆ ಕರೆ ಮಾಡಿದ್ದಾರೆ. ಮಗುವಿನ ನಿಜವಾದ ತಂದೆ ಯಾವಾಗ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದರೋ ಆವಾಗಲೇ ದೂರುದಾರೆ ಸವಿತಾಳ ನಿಜಬಣ್ಣ ಬಯಲಾಗಿದೆ. ನಂತರ ಆಕೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆಕೆ ಪಿಡ್ಸ್ ಬಂದ ಹಾಗೆ ನಟಿಸಿದ್ದಾಳೆ. ಸದ್ಯ ಮಂಡ್ಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Loading

Leave a Reply

Your email address will not be published. Required fields are marked *