ಚಳಿಯಿಂದ ಕಡಲೆ ಬೆಳೆಗೆ ರೋಗದ ಭೀತಿ: ರೈತರಲ್ಲಿ ಆತಂಕ!

ಬ್ಬನಿ, ಚಳಿ ಹೀರಿ ಬೆಳೆಯುವ ಹಿಂಗಾರು ಬೆಳೆಗಳು ಈ ಬಾರಿ ಎರಡೂ ಇಲ್ಲದೆ ಪರಿತಪಿಸುತ್ತಿವೆ. ನವೆಂಬರ್ ತಿಂಗಳು ಮುಗಿಯುತ್ತಿದ್ದರೂ ಇಬ್ಬನಿಯೂ ಇಲ್ಲ, ಚಳಿಯೂ ಇಲ್ಲ, ಹಾಗಾಗಿ ಕಡಲೆ ಸೇರಿ ಇನ್ನಿತರೆ ಹಿಂಗಾರು ಬೆಳೆಗಳಿಗೆ ರೋಗ ನಿರೋಧಕ ಶಕ್ತಿಯಿಲ್ಲದೆ ರೋಗಗಳು ಬಾಧಿಸುವ ಆತಂಕ ರೈತರಿಗೆ ಶುರುವಾಗಿದೆ.

ವ್ಯವಸಾಯ ಪ್ರಕೃತಿಯೊಟ್ಟಿಗಿನ ಜೈವಿಕ ಕ್ರಿಯೆ ಎಂಬುದು ಇದಕ್ಕೆ ಸಾಕ್ಷಿ. ಹಿಂಗಾರಲ್ಲಿ ಚಳಿಗಾಲದ ಬೆಳೆಗಳನ್ನು ಬೆಳೆಯುವ ವಾಡಿಕೆಯಿದೆ. ಮಧ್ಯ ಕರ್ನಾಟಕದ ದಾವಣಗೆರೆ ಸೇರಿ ನೆರೆಹೊರೆಯ ಜಿಲ್ಲೆಗಳಲ್ಲಿ ಕಡಲೆ, ಅಲಸಂದೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ, ಹಾವೇರಿ, ಧಾರವಾಡ ಭಾಗದಲ್ಲಿ ಹಿಂಗಾರು ಜೋಳ ಮತ್ತು ಕುಸುಬೆ ಬೆಳೆಯಿದೆ. ಈ ಬೆಳೆಗಳಿಗೆ ಹೆಚ್ಚಿನ ಮಳೆಯ ಅಗತ್ಯವಿಲ್ಲ, ಬದಲಿಗೆ ಇವು ಇಬ್ಬನಿ ಹೀರಿ ಕಪ್ಪು ಭೂಮಿಯಲ್ಲಿ ಬೆಳೆಯುವ ಬೆಳೆಗಳು. ಆದರೀಗ ಇಬ್ಬನಿಯೇ ಇಲ್ಲದೆ ಈ ಬೆಳೆಗಳಿಗೆ ಸಮಸ್ಯೆ ಆಗಿದೆ.

ಮಧ್ಯ ಕರ್ನಾಟಕದಲ್ಲಿ ಹೆಚ್ಚು ಕಡಲೆ ಬೆಳೆಯಲಾಗುತ್ತದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ ಕೆಳ ಭಾಗದಲ್ಲಿಈ ಬಾರಿ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಹಿಂಗಾರು ಜೋಳ ಬಿತ್ತನೆಗೆ ಸಕಾಲಕ್ಕೆ ಮಳೆ ಬಾರದ ಕಾರಣಕ್ಕೆ ಈ ಬಾರಿ ಕಡಲೆ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಆಗಿದೆ. ಆದರೆ ನವೆಂಬರ್ ತಿಂಗಳು ಮುಗಿಯುತ್ತಾ ಬಂದರೂ ಚಳಿ, ಇಬ್ಬನಿ ಬೀಳುವುದು ತೀವ್ರವಾಗಿಲ್ಲ. ಚಳಿ ಮತ್ತು ಇಬ್ಬನಿ ಕಡಲೆ ಗಿಡಗಳಲ್ಲಿ ಮ್ಯಾಲಿಕ್ ಅಸಿಡ್ (ಹುಳಿ) ತಯಾರು ಮಾಡಲು ಸಹಕಾರಿ, ಮ್ಯಾಲಿಕ್ ಆಸಿಡ್ ತಯಾರಾದರೆ ಗಿಡಗಳಲ್ಲಿ ತಾಳಿಕೆ ಗುಣ ಹೆಚ್ಚಿ ರೋಗಗಳ ಸಂಖ್ಯೆ ಕಡಿಮೆ ಇರುತ್ತದೆ, ಇದೊಂದು ದ್ಯುತಿ ಸಂಶ್ಲೇಷಣೆಯ ಜೈವಿಕ ಕ್ರಿಯೆ.

ಈ ಹೊತ್ತಿನಲ್ಲಿ ಮುಂಜಾನೆ ವೇಳೆಗೆ ಸಾಧಾರಣ ಮಳೆಯಂತೆ ಇಬ್ಬನಿ ಸುರಿಯುತ್ತಿತ್ತು, ಚಳಿಯೂ ತೀವ್ರವಾಗಿರುತ್ತಿತ್ತು. ಆದರೀಗ 31 ರಿಂದ 33 ಡಿಗ್ರಿ ತಾಪಮಾನ ದಾಖಲಾಗುತ್ತಿದ್ದು ಉಷ್ಣಾಂಶ ಹೆಚ್ಚಿ ಹಿಂಗಾರು ಬೆಳೆಗಳಿಗೆ ಸಹ್ಯ ವಾತಾವರಣವಿಲ್ಲ. ಮುಂಗಾರಲ್ಲಿ ಬರ ಆವರಿಸಿ ಬೆಳೆಗಳು ಕೈ ಹಿಡಿಯಲಿಲ್ಲ. ಹಿಂಗಾರಾದರೂ ಕೈ ಹಿಡಿಯಬಹುದು ಎಂದೆಣಿಸಿದರೂ ಅದು ಆಗಲಿಲ್ಲ. ಈಗ ಇಬ್ಬನಿ, ಚಳಿಯೂ ಇಲ್ಲದೆ ಬಿತ್ತಿದ ಬೆಳೆಗಳು ರೋಗಕ್ಕೆ ತುತ್ತಾಗುತ್ತಿದ್ದು ರೈತರು ದುಗುಡಗೊಂಡಿದ್ದಾರೆ.

Loading

Leave a Reply

Your email address will not be published. Required fields are marked *