ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ನಲ್ಲಿ ಇದೀಗ ಸಿಎಂ ಸ್ಥಾನಕ್ಕೆ ಪೈಪೋಟಿ ಶುರುವಾಗಿದ್ದು, ಇಂದು ಹೈಕಮಾಂಡ್ ಸಿಎಂ ಹುದ್ದೆ ಆಯ್ಕೆ ಸಂಬಂಧ ಮಹತ್ವದ ಚರ್ಚೆ ನಡೆಸಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಿಎಂ ಆಯ್ಕೆ ಮಾಡುವ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ದೆಹಲಿಗೆ ತೆರಳಲಿದ್ದು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿ, ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ.
ನಿನ್ನೆ ನಗರದ ಶಾಂಗ್ರಿಲಾ ಹೋಟೆಲ್ನಲ್ಲಿ ನಡೆದ ಶಾಸಕಾಂಗ ಸಭೆಯ ಬಳಿಕ ಮಾತನಾಡಿದ ಉಸ್ತುವಾರಿ ರಣದೀಪ್ ಸುರ್ಜೇವಾಲ, ಶಾಸಕಾಂಗ ಸಭೆಯಲ್ಲಿ ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿದೆ. ಅದನ್ನು ಸಿದ್ದರಾಮಯ್ಯ ಮಂಡಿಸಿದ್ದು, ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲರೂ ಅನುಮೋದಿಸಿದ್ದಾರೆ. ಸೋಮವಾರ ಬೆಳಿಗ್ಗೆಯೂ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ಸುರ್ಜೇವಾಲ ಮಾಹಿತಿ ನೀಡಿದ್ದಾರೆ.
ಇಂದು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಭೆ ನಡೆಸಲಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಹ ಭಾಗವಹಿಸಲಿದ್ದಾರೆ. ಎಐಸಿಸಿ ಅಧ್ಯಕ್ಷರೇ ನಿರ್ಧರಿಸಿದರೆ ಗೊಂದಲ ಆಗುವುದಿಲ್ಲ. ಹೀಗಾಗಿ ಅವರೇ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂಬ ತೀರ್ಮಾನಕ್ಕೆ ವೀಕ್ಷಕರು ಬಂದಿದ್ದಾರೆ ಎನ್ನಲಾಗಿದೆ.