ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ʼಗೆ ಜೈಲು..!

ಢಾಕಾ: ಕಾರ್ಮಿಕ ಕಾನೂನುಗಳ ಉಲ್ಲಂಘನೆ ಆರೋಪದ ಮೇಲೆ ಬಾಂಗ್ಲಾದೇಶದ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಆರ್ಥಶಾಸ್ತ್ರಜ್ಞ ಮುಹಮ್ಮದ್‌ ಯೂನಸ್‌ ಅವರಿಗೆ ಸ್ಥಳೀಯ ನ್ಯಾಯಾಲಯ ಆರು ತಿಂಗಳ ಕಾರಾಗೃಹ ಸೆರೆವಾಸ ಶಿಕ್ಷೆ ವಿಧಿಸಿದೆ. ಯೂನಸ್‌ ಜತೆ ಗ್ರಾಮೀಣ ಟೆಲಿಕಾಂನಲ್ಲಿ ಕೆಲಸ ಮಾಡುತ್ತಿದ್ದ ಅವರ ಮೂವರು ಸಹದ್ಯೋಗಿಗಳಿಗೂ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಕಾರ್ಮಿಕ ಕಾನೂಗಳ ಉಲ್ಲಂಘನೆಯ ಗಂಭಿರ ಆರೋಪದ ಮೇಲೆ ಬಾಂಗ್ಲಾದೇಶದ ಮೂರನೇ ಕಾರ್ಮಿಕ ನ್ಯಾಯಾಲಯದ ನ್ಯಾ. ಶೇಖ್‌ ಮೆರಿನಾ ಸುಲ್ತಾನಾ ಅವರು ಮುಹಮ್ಮದ್‌ ಯೂನಸ್‌ ಮತ್ತವರ ಸಹದ್ಯೋಗಿಗಳಿಗೆ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಇದೇ ವೇಳೆ ನಾಲ್ವರಿಗೂ ತಲಾ 25 ಸಾವಿರ ರೂ. ದಂಡ ವಿಧಿಸಿದರು. ಕೋರ್ಟ್‌ ತೀರ್ಪಿನ ಬೆನ್ನಿಗೆ 5 ಸಾವಿರ ರೂ. ಬಾಂಡ್‌ ಆಧಾರದಲ್ಲಿ ಎಲ್ಲಾ ನಾಲ್ಕು ಮಂದಿಗೆ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದರು.

ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ ಸನಿಹದಲ್ಲೇ (ಜ. 7ಕ್ಕೆ ಮತದಾನ) ನೊಬೆಲ್‌ ಶಾಂತಿ ಪುರಸ್ಕೃತ ಮುಹಮ್ಮದ್‌ ಯೂನಸ್‌ಗೆ ಶಿಕ್ಷೆ ವಿಧಿಸಿರುವ ಕೋರ್ಟ್‌ ತೀರ್ಪು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಪ್ರಧಾನಿ ಶೇಕ್‌ ಹಸೀನಾ ಅವರು ರಾಜಕೀಯ ವಿರೋಧಿಗಳನ್ನು ಮುಗಿಸಲು ಸಂಚು ಮಾಡಿದ್ದಾರೆ ಎಂದು ಯೂನಸ್‌ ಬೆಂಬಲಿಗರು ಆರೋಪಿಸಿದ್ದಾರೆ.

1983ರಲ್ಲಿ ಗ್ರಾಮೀಣ ಬ್ಯಾಂಕ್‌ ಸ್ಥಾಪನೆ ಮಾಡಿದ್ದ 83 ವರ್ಷದ ಮುಹಮ್ಮದ್‌ ಯೂನಸ್‌ ಅವರು ಬಾಂಗ್ಲಾದೇಶದ ಬಡತನ ನಿವಾರಣೆಗೆ ಅಭಿಯಾನ ಹಮ್ಮಿಕೊಂಡಿದ್ದರು. ಬಡತನ ನಿರ್ಮೂಲನೆಯ ಆರ್ಥಿಕ ಚಿಂತನೆಗಳಿಗೆ 2006ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದುಕೊಂಡಿದ್ದರು. ಬಡತನ ನಿರ್ಮೂಲನೆ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರ ಸಬಲೀಕರಣದ ಕ್ಷೇತ್ರದಲ್ಲಿನ ಯೂನಸ್ ಅವರ ಗಣನೀಯ ಕೊಡುಗೆಗಳನ್ನು ಗುರುತಿಸಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗಿತ್ತು.

ಅವರ ಗ್ರಾಮೀಣ ಬ್ಯಾಂಕ್, ಬಾಂಗ್ಲಾದೇಶದ 82 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ 75 ಲಕ್ಷಕ್ಕೂ ಅಧಿಕ ಜನರಿಗೆ ಉಚಿತ ಸಾಲಗಳನ್ನು ಒದಗಿಸಿದೆ. ಇದರಲ್ಲಿ ಶೇ 97ರಷ್ಟು ಮಂದಿ ಮಹಿಳೆಯರಾಗಿದ್ದಾರೆ. ಯೂನಸ್‌ ಸ್ಥಾಪಿಸಿದ್ದ ಗ್ರಾಮೀಣ ಬ್ಯಾಂಕ್‌ ವ್ಯವಹಾರಗಳ ಬಗ್ಗೆ 2011ರಲ್ಲಿ ಸರಕಾರ ತನಿಖೆಗೆ ಆದೇಶಿಸಿತ್ತು. 2013ರಲ್ಲಿ ವಿಚಾರಣೆ ಕೈಗೊಳ್ಳಲಾಗಿತ್ತು. 2023ರ ಆ. 18 ರಂದು ಗ್ರಾಮೀಣ ಟೆಲಿಕಾಂ ನೌಕರರು ಯೂನಸ್‌ ವಿರುದ್ಧ ಕಾರ್ಮಿಕ ಕಾನೂನು ಉಲ್ಲಂಘನೆ ಆರೋಪ ಸಂಬಂಧ ದೂರು ದಾಖಲಿಸಿದ್ದರು.

ಯೂನಸ್‌ ಅವರಿಗೆ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಪ್ರಧಾನಿ ಶೇಖ್‌ ಹಸೀನಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾರ್ಮಿಕ ಕಾನೂನು ಬಳಸಿಕೊಂಡು ನೊಬೆಲ್ ಶಾಂತಿ ಪುರಸ್ಕೃತ ವ್ಯಕ್ತಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ. ಯೂನಸ್ ಅವರು ಬಡ ಜನರ ರಕ್ತ ಹೀರುತ್ತಿದ್ದಾರೆ ಎಂದು ಶೇಖ್ ಹಸೀನಾ ಆರೋಪಿಸಿದ್ದರು. ಯೂನಸ್ ವಿರುದ್ಧ ಅವರು ಅನೇಕ ಬಾರಿ ವಾಗ್ದಾಳಿ ನಡೆಸಿದ್ದರು.

Loading

Leave a Reply

Your email address will not be published. Required fields are marked *