ಹಾಸನ: ನಂದಗೋಡನಹಳ್ಳಿಯಲ್ಲಿ ಅಕ್ರಮವಾಗಿ ಮರಗಳ ಕಡಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ತಮ್ಮ ವಿಕ್ರಂ ಸಿಂಹ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು, ಆನಂತರ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ವಾರದ ಹಿಂದೆ, ಮರಗಳನ್ನು ಅಕ್ರಮವಾಗಿ ಕಡಿದಿರುವ ಆರೋಪದ ಮೇರೆಗೆ ಅವರ ವಿರುದ್ಧ ಅರಣ್ಯಾಧಿಕಾರಿಗಳು ಎಫ್ಐಆರ್ ದಾಖಲಿಸಿದ್ದರು. ಈ ಎಫ್ಐಆರ್ ಆಧರಿಸಿ ಅವರನ್ನು ವಶಕ್ಕೆ ಪಡೆಯಲು ವಿಕ್ರಂ ಅವರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು. ಆದರೆ, ವಿಕ್ರಂ ಅವರು ತಲೆಮರೆಸಿಕೊಂಡಿರುವ ವಿಚಾರ ಬೆಳಕಿಗೆ ಬಂದಿತ್ತು.
ಅವರಿಗಾಗಿ ಹುಡುಕಾಟ ನಡೆಸುತ್ತಿದ್ದ ಅರಣ್ಯಾಧಿಕಾರಿಗಳಿಗೆ, ಅವರು ಬೆಂಗಳೂರಿನಲ್ಲಿ ಇರುವ ಕುರಿತಾಗಿ ಮಾಹಿತಿ ಸಿಕ್ತಿತ್ತು. ಹಾಗಾಗಿ, ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದು ಅವರನ್ನು ಬೆಂಗಳೂರಿನಲ್ಲೇ ಇರುವ ಜಾರುಬಂಡೆ ಕಾವಲ್ ನಲ್ಲಿರುವ ಅರಣ್ಯ ಕೇಂದ್ರದಲ್ಲಿ ವಿಚಾರಣೆಗಾಗಿ ಕರೆದೊಯ್ಯಲಾಗಿತ್ತು. ಆನಂತರ ಅವರನ್ನು ಬಂಧಿಸಿ ಹಾಸನಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.