ಬೆಂಗಳೂರು: ವಿದ್ಯುತ್ ತಂತಿ ತಗುಲಿ 10 ವರ್ಷದ ಬಾಲಕಿ ದಾರುಣ ಸಾವು ವಿದ್ಯುತ್ ತಂತಿ ತಗುಲಿ 10 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗುರುವಾರ ಸಂಜೆ 7:30ರ ಸುಮಾರಿಗೆ ವರ್ತೂರಿನ ಅಪಾರ್ಟ್ಮೆಂಟ್ವೊಂದರಲ್ಲಿ ಘಟನೆ ನಡೆದಿದೆ. ವಿದ್ಯುತ್ ಶಾಕ್ ತಗುಲಿದ ಸ್ವಲ್ಪ ಸಮಯದಲ್ಲೇ ಸ್ಥಳೀಯರು ಬಾಲಕಿಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.
ಸದ್ಯ ಬಾಲಕಿ ಪೋಷಕರಿಂದ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮಧ್ಯರಾತ್ರಿಯೇ ರೊಚ್ಚಿಗೆದ್ದ ಅಪಾರ್ಟ್ಮೆಂಟ್ ನಿವಾಸಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಅಪಾರ್ಟ್ಮೆಂಟ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿ 100ಕ್ಕೂ ಹೆಚ್ಚು ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ವಿದ್ಯುತ್ ಪೂರೈಕೆ, ವಿದ್ಯುತ್ ಕಂಬಗಳ ನಿರ್ವಹಣೆ ನೋಡಿಕೊಳ್ತಿದ್ದ ಪಿಪಿಎಂಎಸ್ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿರುವುದಾಗಿ ಆರೋಪಿಸಿದ್ದಾರೆ.