ಈಗ ಸರ್ವ ಕಾಲದಲ್ಲೂ ಬೆಳೆಯುವ ಹೈಬ್ರಿಡ್ ಬಿತ್ತನೆ ಬೀಜಗಳು ಬಂದಿದ್ದು, ಬರ ನಿರೋಧಕ ಅವರೆ ಬೆಳೆಯಲು ರೈತರು ಮುಂದಾಗಿದ್ದಾರೆ. ಅದರಲ್ಲೂ ಮಳೆ ಕಡಿಮೆಯಾದ ಕಾರಣ ಅಡಕೆ ತೋಟಗಳ ಒಳಗೆ ಬಿಸಿಲು ನಿಯಂತ್ರಿಸಲು ಹಸಿರು ಹೊದಿಕೆಯಾಗಿ ಅವರೆ ಹಾಕಲು ಮುಂದಾಗಿದ್ದು, ಈ ಬಿತ್ತನೆ ಬೀಜಗಳಿಗೆ ಡಿಮ್ಯಾಂಡ್ ಹೆಚ್ಚಿದೆ.
ರೈತರು ಬರ ಎದುರಿಸಲು ತಮ್ಮದೇ ದಾರಿ ಕಂಡುಕೊಳ್ಳುತ್ತಿದ್ದಾರೆ. ಮುಂಗಾರಲ್ಲಿ ಮುಖ್ಯ ಬೆಳೆ ಕಳೆದುಕೊಂಡ ರೈತ ಎದೆಗುಂದಿಲ್ಲ, ಹಿಂಗಾರಲ್ಲೂ ಮಳೆ ಕೈ ಕೊಟ್ಟಿದ್ದರಿಂದ ಬರ ನಿರೋಧಕ ಬೆಳೆಗಳತ್ತ ಗಮನ ಹರಿಸಿದ್ದಾರೆ. ಈಗಾಗಲೇ ಕಡಲೆ, ಅಲಸಂದೆ ಬಿತ್ತನೆ ಮಾಡಿರುವ ರೈತರು ಈಗ ಮತ್ತೊಂದು ಬರ ನಿರೋಧಕ ಬೆಳೆಯಾದ ಅವರೆ ಬೆಳೆಯುತ್ತಿದ್ದಾರೆ.
ಜಗಳೂರು, ಮಾಯಕೊಂಡ ಸೇರಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಕಡಲೆ ಜತೆ ಈಗ ಅವರೆ ಬೆಳೆಯಲು ರೈತರು ಮುಂದಾಗಿದ್ದಾರೆ. ಅವರೆ ಸೀಸನ್ ಬೆಳೆ ಮಾತ್ರವಾಗಿರದೆ ಕಾಲಾತೀತವಾಗಿದೆ. ವರ್ಷ ಪೂರ್ಣ ಬೆಳೆಯುವಂತಹ ಬಿತ್ತನೆ ಬೀಜಗಳು ಬಂದಿದ್ದು, ಬಿತ್ತನೆ ಬೀಜಕ್ಕೆ ಡಿಮ್ಯಾಂಡ್ ಬಂದಿದೆ.
ಸಾಮಾನ್ಯವಾಗಿ ದಾವಣಗೆರೆ ಜಿಲ್ಲೆಯಲ್ಲಿಅವರೆ ಕೃಷಿ ಇಲ್ಲ, ಇದ್ದರೂ ಬೆರಳೆಣಿಕೆ ರೈತರು ಮಾತ್ರ ಬೆಳೆಯುತ್ತಿದ್ದರು. ಆದರೆ ಈ ಬಾರಿ ಬರದ ಕಾರಣಕ್ಕೆ ರೈತರು ಅವರೆ ಮೊರೆ ಹೋಗುತ್ತಿದ್ದು, ಬಿತ್ತನೆ ಬೀಜಕ್ಕೆ ಬಾರಿ ಬೇಡಿಕೆ ಬಂದಿದೆ. ಬೆಲೆಯೂ ದುಬಾರಿ ಆಗುತ್ತಿದೆ. ಬಿತ್ತನೆ ಬೀಜದ ಅಂಗಡಿಗಳಲ್ಲಿಅವರೆ ಬಿತ್ತನೆ ಬೀಜ ಬುಕ್ ಮಾಡಿ ತರಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರೆ ಬೆಳೆ ಬೆಳೆಯುವ ಪ್ರಮಾಣ ಹೆಚ್ಚುತ್ತಿದೆ ಎಂದು ರೈತರು ಖುಷಿ ಪಡುತ್ತಿದ್ದಾರೆ.