ಬೆಂಗಳೂರು:– ಅಹಿಂದ ಸಮಾವೇಶಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಚಿತ್ರದುರ್ಗದಲ್ಲಿ ನಡೆಯುವ ಅಹಿಂದ ಸಮಾವೇಶವು ಲಿಂಗಾಯತರು ಸೇರಿದಂತೆ ಯಾವುದೇ ಸಮುದಾಯಗಳ ವಿರುದ್ಧವೂ ಅಲ್ಲ’ ಎಂದರು.
ಲಿಂಗಾಯತರು ಸಮಾವೇಶ ನಡೆಸಿರುವುದಕ್ಕೆ ಪ್ರತಿಯಾಗಿ ಅಹಿಂದ ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳುವಂತಿಲ್ಲ.
ಅವರಂತೆ ನಾವು ಕೂಡ ನಮ್ಮ ಸಮಾಜದ ಸಮಾವೇಶ ನಡೆಸುತ್ತಿದ್ದೇವೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದರು.
ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ತಿರಸ್ಕರಿಸುವಂತೆ ಲಿಂಗಾಯತ ಸಮಾವೇಶದಲ್ಲಿ ನಿರ್ಣಯ ಕೈಗೊಂಡಿರುವ ಕುರಿತು ಕೇಳಿದಾಗ, ‘ವರದಿಯನ್ನು ಇನ್ನೂ ಸರ್ಕಾರ ಸ್ವೀಕರಿಸಿಲ್ಲ. ಈಗಲೇ ತಿರಸ್ಕರಿಸುವಂತೆ ಬೇಡಿಕೆ ಇಡುವುದು ಸರಿಯಲ್ಲ’ ಎಂದು ಹೇಳಿದರು.
‘ಒಕ್ಕಲಿಗರು, ಲಿಂಗಾಯತರು ವರದಿ ಸ್ವೀಕರಿಸದಂತೆ ಬೇಡಿಕೆ ಇಡುತ್ತಿದ್ದಾರೆ. ಈ ವರದಿ ಯಾವುದೇ ಜಾತಿಗೆ ಸೀಮಿತವಾದುದಲ್ಲ. ಇಡೀ ರಾಜ್ಯದ ಜನರ ಮಾಹಿತಿ ಇದೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಅವಕಾಶವಿದೆ. ಆದರೆ, ವರದಿ ಸ್ವೀಕರಿಸುವುದಾಗಿ ಮುಖ್ಯಮಂತ್ರಿಯವರು ಈಗಾಗಲೇ ಹೇಳಿದ್ದಾರೆ’ ಎಂದರು.