ನವದೆಹಲಿ: ನಾನು ಕುಸ್ತಿ (Wrestling) ಬಿಟ್ಟಿದ್ದರೂ ಚಿಂತಿತಳಾಗಿದ್ದೇನೆ. ನನ್ನ ಕಿರಿಯ ಮಹಿಳಾ ಕುಸ್ತಿಪಟುಗಳಿಗೆ ಏನು ಹೇಳಬೇಕು ಅನ್ನೋದೇ ಗೊತ್ತಾಗುತ್ತಿಲ್ಲ ಎಂದು ಕುಸ್ತಿಪಟು ಸಾಕ್ಷಿ ಮಲಿಕ್ (Sakshee Malikkh) ಬೇಸರ ವ್ಯಕ್ತಪಡಿಸಿದ್ದಾರೆ. 2024ರ ಜೂನಿಯರ್ ನಾಷನಲ್ ಗೇಮ್ಸ್ ಕುರಿತು ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಾಕ್ಷಿ, ನಾನು ಕುಸ್ತಿಯನ್ನು ಬಿಟ್ಟಿದ್ದೇನೆ, ಆದರೂ ನಾನು ಚಿಂತಿತಳಾಗಿದ್ದೇನೆ.
ಏಕೆಂದರೆ, ಏಪ್ರಿಲ್ 28 ರಿಂದ ಜೂನಿಯರ್ ನ್ಯಾಷನಲ್ ಲೆವೆಲ್ ಪಂದ್ಯಗಳು ನಡೆಯಲಿವೆ. ಉತ್ತರ ಪ್ರದೇಶದ ನಂದನಿನಗರ ಗೊಂಡಾದಲ್ಲಿ ಕುಸ್ತಿ ನಡೆಸಲು ನೂತನ ಕುಸ್ತಿ ಒಕ್ಕೂಟ ನಿರ್ಧರಿಸಿದೆ. ಈ ಬಗ್ಗೆ ನನ್ನ ಕಿರಿಯ ಮಹಿಳಾ ಕುಸ್ತಿಪಟುಗಳು ಕರೆ ಮಾಡಿ ತಿಳಿಸಿದ್ದಾರೆ. ಅವರಿಗೆ ಏನು ಹೇಳಬೇಕು ಅನ್ನೋದೆ ತಿಳಿಯುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಗೊಂಡಾ ಬ್ರಿಜ್‌ಭೂಷಣ್‌ನ (Brij Bhushan Sharan Singh) ಭದ್ರಕೋಟೆ. ಈಗ ಜೂನಿಯರ್ ಮಹಿಳಾ ಕುಸ್ತಿಪಟುಗಳು ಯಾವ ಪರಿಸರದಲ್ಲಿ ಕುಸ್ತಿ ಮಾಡಲು ಹೋಗುತ್ತಾರೆ? ಅನ್ನೋದನ್ನ ಊಹಿಸಿ. ನಂದನಿನಗರ ಬಿಟ್ಟು ಬೇರೆಲ್ಲೂ ಆಯೋಜನೆ ಮಾಡಲು ಈ ದೇಶದಲ್ಲಿ ಜಾಗವಿಲ್ಲವೇ? ಏನು ಮಾಡಬೇಕೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.