ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಹೊಸದಾಗಿ ಆಯ್ಕೆಯಾದ ಸಂಜಯ್ ಸಿಂಗ್ (Sanjay Singh) ನೇತೃತ್ವದ ಭಾರತೀಯ ಕುಸ್ತಿ ಫೆಡರೇಶನ್ (Wrestling Federation of India) ಸಮಿತಿಯನ್ನು ಕ್ರೀಡಾ ಸಚಿವಾಲಯ (Sports Ministry) ಅಮಾನತುಗೊಳಿಸಿದೆ. ಡಬ್ಲ್ಯೂಎಫ್‌ಐ (WFI) ಸಂವಿಧಾನ ಮತ್ತು ನಿಯಮವನ್ನು ಉಲ್ಲಂಘಿಸಿ ನಿರ್ಧಾರವನ್ನು ಕೈಗೊಂಡಿದ್ದಕ್ಕೆ ಭಾನುವಾರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿ ಆದೇಶ ಪ್ರಕಟಿಸಿದೆ.
ಭಾರತದ ಕುಸ್ತಿ ಫೆಡರೇಶನ್‌ನ ಹೊಸದಾಗಿ ಚುನಾಯಿತರಾದ ಸಂಜಯ್ ಕುಮಾರ್ ಸಿಂಗ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ 15 ಮತ್ತು 20 ವರ್ಷದ ಒಳಗಿನ ರಾಷ್ಟ್ರೀಯ ಕುಸ್ತಿ ಪಂದ್ಯಾಟ ಉತ್ತರ ಪ್ರದೇಶದದ ಗೊಂಡಾದ ನಂದಿನಿ ನಗರದಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದರು. ರಾಷ್ಟ್ರೀಯ ಕುಸ್ತಿಪಟುಗಳಿಗೆ ಸಾಕಷ್ಟು ಸೂಚನೆ ನೀಡದೇ ಮತ್ತು WFI ನ ಸಂವಿಧಾನದ ನಿಬಂಧನೆಗಳನ್ನು ಅನುಸರಿಸದೇ ಈ ಘೋಷಣೆಯನ್ನು ತರಾತುರಿಯಲ್ಲಿ ಮಾಡಲಾಗಿದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕುಸ್ತಿಪಟುಗಳು ತಯಾರಾಗಲು ಕನಿಷ್ಠ 15 ದಿನಗಳ ಸೂಚನೆ ಅಗತ್ಯವಿದೆ. ಯಾವುದೇ ಟೂರ್ನಿ ನಡೆಸುವ ಮೊದಲು ಕಾರ್ಯಕಾರಿ ಸಮಿತಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಹೊಸದಾಗಿ ಚುನಾಯಿತ ಸಮಿತಿಯು ಕ್ರೀಡಾ ಸಂಹಿತೆಯನ್ನು ಕಡೆಗಣಿಸಿ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದೆ.