ಬೆಂಗಳೂರು:- ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಚಳಿಯ ವಾತಾವರಣ ಹೆಚ್ಚಿದೆ. ಜನರಿಗೆ ಧನುರ್ ಮಾಸದ ಚಳಿಯ ಅನುಭವ ಶುರುವಾಗಿದೆ (Cold Weather). ಮತ್ತೊಂದೆಡೆ ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ. ಡಿ.21 ರಿಂದ 26ರ ವರೆಗೆ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂದಿನ 24 ಗಂಟೆಗಳು ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ.
ಇನ್ನು ಮಳೆಯ ಮುನ್ಸೂಚನೆ ಇಲ್ಲ ಆದರೂ ರಾಜ್ಯದ ಕೊಡಗು, ಹಾಸನ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿಅಲ್ಲಲ್ಲಿ ಚದುರಿದಂತೆ ಹಗುರ ಮಳೆ ಆಗಲಿದ್ದು ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವೆಯಿರುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ನಗರ ಕೇಂದ್ರದ ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ 23.6 ° C ಗರಿಷ್ಠ ತಾಪಮಾನ ದಾಖಲಾಗಿದೆ
ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ ಕುಸಿದಿದೆ. ಒಂದೇ ದಿನದಲ್ಲಿ ಕನಿಷ್ಠ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಕಡಿಮೆಯಾಗಿದೆ. ವಿಜಯಪುರದಲ್ಲಿ ಕಳೆದ ವಾರ ಕನಿಷ್ಠ ಉಷ್ಣಾಂಶ 6 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು. ಆನಂತರ ಏರಿಕೆ ಕಂಡು ಈಗ ಮತ್ತೆ ಕುಸಿದಿದೆ.
ಬೀದರ್‌ನಲ್ಲಿ ಬುಧವಾರ 12.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಹಾವೇರಿಯಲ್ಲಿ 16.2 ಡಿಗ್ರಿ ಹಾಗೂ ರಾಯಚೂರಿನಲ್ಲಿ 16.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಳಗಾವಿ ನಗರ ಹಾಗೂ ಬೆಳಗಾವಿ ವಿಮಾನ ನಿಲ್ದಣಾ ಪ್ರದೇಶ, ಬಾಗಲಕೋಟೆ, ಧಾರವಾಡದಲ್ಲೂ ಚಳಿಯ ಅನುಭವ ಹೆಚ್ಚಾಗಿದೆ