2024 ರಲ್ಲಿ ನಡೆಯಲಿರುವ 17ನೇ ಐಪಿಎಲ್ ಸೀಸನ್‌ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲ್ಲಿದೆ. ಈ ನಡುವೆ ಮುಂದಿನ ಆವೃತ್ತಿಯ ಐಪಿಎಲ್ ಆರಂಭದ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದ್ದು, ವರದಿಯ ಪ್ರಕಾರ 17ನೇ ಆವೃತ್ತಿಯ ಐಪಿಎಲ್ ಮಾರ್ಚ್ 22 ರಿಂದ ಆರಂಭವಾಗಿ ಮೇ ಅಂತ್ಯದವರೆಗೆ ಅಂದರೆ ಮೇ 29 ರವರೆಗೆ ನಡೆಯುವ ನಿರೀಕ್ಷೆಯಿದೆ. ಜೂನ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿಯ ಐಪಿಎಲ್ ಅನ್ನು ಬೇಗನೇ ಮುಗಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.
ಮುಂದಿನ ವರ್ಷ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಇದು ಐಪಿಎಲ್ ವೇಳಾಪಟ್ಟಿಯ ಮೇಲೂ ಪರಿಣಾಮ ಬೀರುವ ನಿರೀಕ್ಷೆಯಿದೆ. ಈ ಕಾರಣಕ್ಕೆ ಐಪಿಎಲ್‌ನ ಸಂಪೂರ್ಣ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಕ್ರಿಕ್‌ಬಜ್ ವರದಿಯ ಪ್ರಕಾರ, ಎಲ್ಲವೂ ಸರಿಯಾಗಿ ನಡೆದರೆ ಐಪಿಎಲ್ 2024 ಅನ್ನು ಮಾರ್ಚ್ 22 ರಿಂದ ಮೇ ಅಂತ್ಯದವರೆಗೆ ಆಯೋಜಿಸಬಹುದು. ಬಿಸಿಸಿಐ ಐಪಿಎಲ್ 2024 ಕ್ಕೆ ವಿಂಡೋವನ್ನು ನಿಗದಿಪಡಿಸಿದೆ. ಹರಾಜು ಪ್ರಕ್ರಿಯೆ ಮುಗಿದ ಬಳಿಕ ವೇಳಾಪಟ್ಟಿಗೆ ಸಂಬಂಧಿಸಿದ ಸಿದ್ಧತೆಗಳು ಆರಂಭವಾಗಲಿವೆ.
ಐಪಿಎಲ್‌ನ ಮಿನಿ ಹರಾಜಿನ ಕುರಿತು ಮಾತನಾಡುವುದಾದರೆ, ಮೊದಲ ಬಾರಿಗೆ ಐಪಿಎಲ್ 2024 ರ ಹರಾಜು ವಿದೇಶದಲ್ಲಿ ನಡೆಯಲಿದೆ. ದುಬೈನ ಕೋಕಾಕೋಲಾ ಅರೆನಾದಲ್ಲಿ ಹರಾಜು ನಡೆಯಲಿದೆ. 1000 ಕ್ಕೂ ಹೆಚ್ಚು ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ನಂತರ 333 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಎಲ್ಲಾ ತಂಡಗಳ ಖಾಲಿ ಇರುವ ಸ್ಲಾಟ್‌ಗಳನ್ನು ಒಟ್ಟಿಗೆ ನೋಡಿದರೆ, 77 ಆಟಗಾರರನ್ನು ಮಾತ್ರ ಖರೀದಿಸಲಾಗುತ್ತದೆ. ಇದರಲ್ಲಿ 30 ವಿದೇಶಿ ಆಟಗಾರರು ಸೇರಿದ್ದಾರೆ