ಬೆಳಗಾವಿ: ಮೈಸೂರು ಕಾಗದ ಕಾರ್ಖಾನೆ (Mysore Paper Mills) ಮರುಪ್ರಾರಂಭ ಮಾಡಲು ಸರ್ಕಾರ ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ (MB Patil) ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರುದ್ರೇಗೌಡ ಪ್ರಶ್ನೆ ಕೇಳಿದ್ದು, ಸರ್ಕಾರ ಮೈಸೂರು ಕಾಗದ ಕಾರ್ಖಾನೆ ಮರು ಪ್ರಾರಂಭ ಮಾಡಬೇಕು. 3 ವರ್ಷಗಳಿಂದ ನಾನು ಈ ಪ್ರಶ್ನೆ ಕೇಳುತ್ತಿದ್ದೇನೆ. ಈ ಕಾರ್ಖಾನೆ ಪ್ರಾರಂಭ ಮಾಡಿದರೆ ನೌಕರರಿಗೆ ಅನುಕೂಲ ಆಗುತ್ತದೆ. ಸರ್ಕಾರ ಪಾಸಿಟಿವ್ ಆಗಿ ಕಾರ್ಖಾನೆ ಪ್ರಾರಂಭ ಮಾಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸಚಿವ ಎಂಬಿ ಪಾಟೀಲ್ ಉತ್ತರ ನೀಡಿ, ಮೈಸೂರು ಕಾಗದ ಕಾರ್ಖಾನೆ ಹಣಕಾಸಿನ ಸಮಸ್ಯೆಯಿಂದ 2015ರಲ್ಲಿ ಸ್ಥಗಿತ ಮಾಡಲಾಗಿದೆ. ಜೂನ್ 2023ರ ಅಂತ್ಯಕ್ಕೆ 1,482 ಕೋಟಿ ಸಂಚಿತ ನಷ್ಟ ಆಗಿದೆ. ಖಾಸಗಿ ಅವರು ಕಂಪನಿ ಅವರಿಗೂ 3 ಬಾರಿ ಆಹ್ವಾನ ಮಾಡಿದ್ದೇವೆ. ಆದರೂ ಯಾರೂ ಕಾರ್ಖಾನೆ ಪ್ರಾರಂಭಕ್ಕೆ ಮುಂದೆ ಬರಲಿಲ್ಲ ಎಂದು ಮಾಹಿತಿ ನೀಡಿದರು. ನಾನು ಈಗಾಗಲೇ ಸಭೆ ಮಾಡಿದ್ದೇನೆ. ಕಾಗದ ಕಾರ್ಖಾನೆಗೆ ನೀಲಗಿರಿ ಅವಶ್ಯಕತೆ ಇದೆ.
ಆದರೆ ನಮ್ಮಲ್ಲಿ ನೀಲಗಿರಿ ಬೆಳೆಯಲು ನಿಷೇಧ ಇದೆ. ಹೀಗಾಗಿ ಖಾಸಗಿ ಅವರು ಮುಂದೆ ಬರುತ್ತಿಲ್ಲ. ನಾವೂ ಮೈಸೂರು ಕಾಗದ ಕಾರ್ಖಾನೆ ಪ್ರಾರಂಭ ಮಾಡಲು ಉತ್ಸುಕರಾಗಿದ್ದೇವೆ. ಅರಣ್ಯ ಇಲಾಖೆಯ ತಜ್ಞರ ಸಮಿತಿಯು ನೀಲಗಿರಿ ಬೆಳೆಯಲು MPM ವಿನಾಯ್ತಿ ನೀಡುವ ಸಂಬಂಧ ಪರಿಶೀಲಿಸಿ ವರದಿ ನೀಡಬೇಕಿದೆ. ಕಂಪನಿಯ ಸಾಲ, ಬಾಕಿ ಕುರಿತು ಆರ್ಥಿಕ ಇಲಾಖೆ ಜೊತೆ ಸಮಾಲೋಚನೆ ಮಾಡಲಾಗುತ್ತಿದೆ. ಇವೆರಡೂ ವಿಷಯಗಳ ಬಗ್ಗೆ ನಿರ್ಧಾರ ಆದ ಮೇಲೆ ಕಾರ್ಖಾನೆ ಪ್ರಾರಂಭದ ಬಗ್ಗೆ ಕ್ರಮವಹಿಸುತ್ತೇವೆ ಎಂದು ಭರವಸೆ ಕೊಟ್ಟರು.