ತುಮಕೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರ (B S Yediyurappa) ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಮಾಜಿ ಸಚಿವ ವಿ.ಸೋಮಣ್ಣ (V Somanna) ಬ್ಯಾಟ್ ಬೀಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಯತ್ನಾಳ್ ಒಬ್ಬರು ಸುಸಂಸ್ಕೃತ ರಾಜಕಾರಣಿ, ನನ್ನ ನೋವು ನನಗೆ ಗೊತ್ತು, ಅವರ ನೋವು ಅವರಿಗೆ ಗೊತ್ತು ಹಾಗಾಗಿ ಅವರು ಮಾತನಾಡಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.
ಯಡಿಯೂರಪ್ಪ ಹಿರಿಯ ನಾಯಕರಾಗಿದ್ದು, ಅವರಿಗೆ ಯತ್ನಾಳ್ (Basangouda Patil Yatnal) ಹೀಗೆ ಹೇಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ಹಿರಿತನ ಅನ್ನೋದು ನಡತೆಯಲ್ಲಿ ಇರಬೇಕು. ನಾನು 40 ವರ್ಷ ರಾಜಕಾರಣ ಮಾಡಿದರೂ ಯಾರೂ ಬೊಟ್ಟು ಮಾಡಿ ತೋರಿಸುವ ಹಾಗೆ ಮಾಡಿಕೊಂಡಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪನವರಿಗೆ ಕಟುಕಿದ್ದಾರೆ. ಇದೇ ವೇಳೆ ದೆಹಲಿಯಿಂದ ನನಗೆ ಕರೆ ಬಂದಿದ್ದು, ಎರಡು ಮೂರು ದಿನದಲ್ಲಿ ದೆಹಲಿಗೆ ಹೋಗುತ್ತೇನೆ. ನಮ್ಮ ನೋವು ಹೇಳಿಬರುತ್ತೇನೆ ಎಂದು ಸೋಮಣ್ಣ ಹೇಳಿದ್ದಾರೆ.