ಅಡಿಕೆ ಬೆಳೆಯು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದು, ವಾತಾವರಣದಲ್ಲಿ ಉಂಟಾಗುತ್ತಿರುವ ವೈಪರೀತ್ಯದಿಂದಾಗಿ ಈ ಅಡಿಕೆ ಬೆಳೆಯಲಿ ಹಾನಿ ಉಂಟು ಮಾಡುತ್ತಿದ್ದ ರೋಗಗಳ ಸಂತತಿ ತೀವ್ರ ವೇಗವಾಗಿ ಅಭಿವೃದ್ಧಿ ಹೊಂದಿ ಹೆಚ್ಚಿನ ಹಾನಿಯನ್ನುಂಟು ಮಾಡುತ್ತಿವೆ.
ಅವುಗಳಲ್ಲಿ ಎಲೆ ಚುಕ್ಕೆ ರೋಗ ಪ್ರಮುಖವಾಗಿದ್ದು, ಮಲೆನಾಡಿನೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ.
ಈ ಭಾಗದ ಬೆಳೆಗಾರರಲ್ಲಿ ಹೆಚ್ಚು ಆತಂಕಕ್ಕೆ ಕೂಡ ಇದಿ ಕಾರಣವಾಗುತ್ತಿದೆ. ಈ ರೋಗದಿಂದಾಗಿ ಆಡಿಕೆಯಲ್ಲಿ ಇಳುವರಿ ಕುಂಠಿತವಾಗುತ್ತಿದೆ.
ನಿರ್ದಿಷ್ಟ ಅವಧಿಯಲ್ಲಿ ಸರಿಯಾದ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಂಡಿದ್ದೇ ಆದರೆ, ಈ ರೋಗದ ಬಾಧೆ ಹಾಗೂ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಈ ರೋಗದ ಲಕ್ಷಣಗಳು, ಹರಡುವಿಕೆ ಮತ್ತು ತೆಗೆದುಕೊಳ್ಳಬೇಕಾದ ನಿರ್ವಹಣಾ ಕ್ರಮಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ರೋಗದ ಲಕ್ಷಣಗಳು:
- ಕೊಲೆಟೋಟ್ರೈಕಮ್ ಶಿಲೀಂದ್ರವು ಸೋಗೆಗಳ ಗರಿಗಳ ಮೇಲೆ ಹಳದಿ ಮತ್ತು ಕಪ್ಪು ಬಣ್ಣದ ಚಿಕ್ಕ ಗಾತ್ರದ ಚುಕ್ಕೆಗಳು ಕಾಣಿಸುತ್ತವೆ ಹಾಗೂ ಗರಿಗಳು ತುದಿಯಿಂದ ಒಣಗಲು ಪ್ರಾರಂಭಿಸುತ್ತವೆ.
- ಫಿಲೊಸ್ಟಿಕ್ಟ್ ಶಿಲೀಂದ್ರವು ಮರಗಳ ಸೋಗೆಗಳ ಮೇಲಾಗದಲ್ಲಿ ದೊಡ್ಡ ಗಾತ್ರದ ಕಂದು ಮತ್ತು ಕಪ್ಪು ಬಣ್ಣದ ಚುಕ್ಕೆಗಳ ರೂಪದಲ್ಲಿ ಕಾಣಿಸುತ್ತದೆ.
- ಪೆಸ್ಟಲೋಸಿಯಾ ಬಾಧಿತ ಗರಿಗಳ ಮೇಲೆ ನಸು ಹಳದಿ ಬಣ್ಣದ ಚುಕ್ಕೆಗಳು ಕಾಣಿಸುತ್ತವೆ.
- ಈ ಚುಕ್ಕೆಗಳು ಕೆಳಗಿನ ಎಲೆಗಳಿಂದ ಪ್ರಾರಂಭವಾಗಿ ಶೀಘ್ರವಾಗಿ ಒಂದಕೊಂದು ಕೂಡಿಕೊಂಡು ಪೂರ್ತಿ ಹೆಡೆಗಳನ್ನು ಆವರಿಸುತ್ತವೆ.
- ರೋಗ ಉಲ್ಬಣಗೊಂಡಾಗ ಹೆಡೆಗಳು ಒಣಗಲಾರಂಭಿಸುತ್ತವೆ. ಇಂತಹ ಒಣಗಿದ ಎಲ್ಲಾ ಹೆಡೆಗಳು ಕಾಂಡಕ್ಕೆ ಜೋತು ಬಿದ್ದು ಮರ ಶಕ್ತಿ ಕಳೆದುಕೊಂಡು, ಇಳುವರಿ ಕುಂಠಿತಗೊಳ್ಳುತ್ತದೆ.
- ಶಿಲೀಂಧ್ರನಾಶಕಗಳ ಬಳಕೆ:
- 1% ಬೋರ್ಡೋ ದ್ರಾವಣ ಅಥವಾ 3% ರ ತಾಮ್ರದ ಆಕ್ಸಿಕ್ಲೋರೈಡ್ ಶಿಲೀಂದ್ರನಾಶಕಗಳನ್ನು ಒಂದು ಲೀಟರ್ ನೀರಿನೊಂದಿಗೆ ಅಂಟು ದ್ರಾವಣ ಜೊತೆ ಬೆರೆಸಿ ಸಿಂಪಡಿಸುವುದು
- ಅಥವಾ ರೋಗ ಲಕ್ಷಣದ ಪ್ರಾರಂಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾಂಕೋಜೆಬ್ (63%) ಮತ್ತು ಕಾರ್ಬೋಜಿಯಮ್ (12%) 2 ಗ್ರಾಂ. ಒಂದು ಲೀಟರ್ ನೀರಿನ ಜೊತೆಗೆ, ಅಂಟು ದ್ರಾವಣ (1 ಮಿ. ಲೀ.) ಪ್ರತಿ ಲೀಟರ್ ನೀರಿನಲಿ ಬೆರೆಸಿ ಸಿಂಪಡಿಸಬೇಕು
- ಅಥವಾ ಹೆಕ್ಸ್‌ಕೋನಾಜೋಲ್ (5% ಎಸ್.ಸಿ./ ಇ, ಸಿ.) ಅಥವಾ ಪ್ರೊಪಿಕೋನಜೋಲ್ (25% ಇ, ಸಿ.) ಅಂತರವಾಪಿ ಶಿಲೀಂಧ್ರ ನಾಶಕಗಳನ್ನು 1 ಮಿ. ಲೀ. ಜೊತೆಗೆ ಅಂಟು ದ್ರಾವಣ (1ಮಿ, ಲೇ.) ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ರೋಗದ ಬಾಧೆಯು ಅಂತರ ಬೆಳೆಯಾದ ಕಾಳುಮೆಣಸು ಬೆಳೆಗೂ ಸಹ ಹರಡುವುದರಿಂದ ಇವುಗಳಿಗೂ ಸಹ ಸಿಂಪಡಣೆ ಮಾಡಬೇಕು.
- ಅಥವಾ 1% ಸುಡೊಮೋನಾಸ್ ಫ್ಲೋರೊಸನ್ಸ್ ಜೈವಿಕ ಶಿಲೀಂದ್ರ ನಾಶಕವನ್ನು ಸಿಂಪಡಣೆ ಮಾಡಬೇಕು.
ರೋಗ ಮತ್ತೆ ಕಾಣಿಸಿಕೊಂಡಲ್ಲಿ ಮೇಲೆ ತಿಳಿಸಿದ ಯಾವುದಾದರೊಂದು ಶಿಲೀಂಧ್ರ ನಾಶಕಗಳನ್ನು 20-25 ದಿನಗಳ ಅಂತರದಲ್ಲಿ ಸಿಂಪಡಣೆಯನ್ನು ಪುನರಾವರ್ತಿಸಬೇಕು